ಗುವಾಹಟಿ: ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಚಿಂಗ್ಗಿಂಗ್ ಗ್ರಾಮದ ಸಮೀಪ ಸೇನಾ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಶುಕ್ರವಾರ (ಅಕ್ಟೋಬರ್ 21) ನಡೆದಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನವೆಂಬರ್ 11ಕ್ಕೆ ರಾಜ್ಯಕ್ಕೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಅತ್ಯಾಧುನಿಕ ಲಘು ಹೆಲಿಕಾಪ್ಟರ್ (ಎಎಲ್ ಎಚ್) ಪತನಗೊಂಡ ಸ್ಥಳಕ್ಕೆ ತೆರಳಲು ಯಾವುದೇ ರಸ್ತೆ ಸಂಪರ್ಕ ಇಲ್ಲ. ಆದರೆ ಹೆಲಿಕಾಪ್ಟರ್ ಪತ್ತೆ ಹಚ್ಚಲು ರಕ್ಷಣಾ ತಂಡವನ್ನು ಕಳುಹಿಸಲಾಗಿದೆ ಎಂದು ಅಪ್ಪರ್ ಸಿಯಾಂಗ್ ಹಿರಿಯ ಪೊಲೀಸ್ ಅಧಿಕಾರಿ ಜುಮ್ಮಾರ್ ಬಸಾರ್ ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಈ ಗ್ರಾಮವನ್ನು ಸಂಪರ್ಕಿಸಲು ತೂಗು ಸೇತುವೆ ಹೊರತುಪಡಿಸಿ ಬೇರೆ ಯಾವುದೇ ಸಂಚಾರ ಮಾರ್ಗವಿಲ್ಲ. ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ಎರಡು ಹೆಲಿಕಾಪ್ಟರ್ ಗಳಲ್ಲಿ ರಕ್ಷಣಾ ತಂಡವನ್ನು ರವಾನಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮಸ್ಥರು ಕೈಜೋಡಿಸಿರುವುದಾಗಿ ವರದಿ ತಿಳಿಸಿದೆ.
ಭಾರತೀಯ ಸೇನೆಯ ಲಘು ಹೆಲಿಕಾಪ್ಟರ್ ಪತನಗೊಂಡಿದೆ ಎಂಬ ಆಘಾತಕಾರಿ ಸುದ್ದಿ ಬಂದಿರುವುದಾಗಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಜು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದ ಎರಡನೇ ಘಟನೆ ಇದಾಗಿದೆ.
2 ಶವ ಪತ್ತೆ:
ಭಾರತೀಯ ಸೇನಾ ಹೆಲಿಕಾಪ್ಟರ್ ಪತನಗೊಂಡ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಇಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಇಬ್ಬರು ಪೈಲಟ್ ಸೇರಿದಂತೆ ಐವರು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಐವರು ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.