ಹೊಸದಿಲ್ಲಿ: ಸೇನೆಯ ಬಳಿ ಯುದ್ಧಕ್ಕೆ ಬೇಕಾಗುವಷ್ಟು ಶಸ್ತ್ರಗಳ ಸಂಗ್ರಹ ಇಲ್ಲ, ಬಹುಮುಖ್ಯ ಬಿಡಿಭಾಗಗಳ ಕೊರತೆ ಎದುರಿಸುತ್ತಿದೆ ಇತ್ಯಾದಿ ಬೆಚ್ಚಿ ಬೀಳಿಸುವ ವರದಿಗಳ ನಡುವೆಯೇ, ಈಗ ಅಗತ್ಯ ಬಹುಮುಖ್ಯ ಬಿಡಿಭಾಗಗಳನ್ನು ತ್ವರಿತವಾಗಿ ಭಾರತದಲ್ಲೇ ತಯಾರಿಸುವುದಕ್ಕೆ ಮತ್ತು ಅವುಗಳನ್ನೇ ಖರೀದಿಸಲು ಸೇನೆ ಮುಂದಾಗಿದೆ.
ವಿದೇಶದಿಂದ ಅಗತ್ಯ ಬಿಡಿಭಾಗಗಳ ಪೂರೈಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಉತ್ಪಾದಕ ಮಂಡಳಿ (ಒಎಫ್ಬಿ) (41 ವಿವಿಧ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಗಳ ಮುಖ್ಯ ಸಂಸ್ಥೆ) ಭಾರತದಲ್ಲೇ ಅಗತ್ಯ ವಸ್ತುಗಳನ್ನು ತಯಾರಿಸಲು ಚಿಂತಿಸಿದೆ. ಸದ್ಯ ಶೇ. 60ರಷ್ಟು ಬಿಡಿಭಾಗಗಳಿಗೆ ಸೇನೆ ವಿದೇಶಗಳನ್ನು ನೆಚ್ಚಿಕೊಂಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಇವುಗಳ ಅವಲಂಬನೆಯನ್ನು ಶೇ. 30ರಷ್ಟಕ್ಕೆ ಇಳಿಸಲು ಯೋಜಿಸಲಾಗಿದೆ.
ಈ ಸಂಬಂಧ ಈಗಾಗಲೇ ಸೇನೆಯ ಶಸ್ತ್ರಾಸ್ತ್ರ ಕೋಠಿ ಮುಖ್ಯಸ್ಥರು (ಎಂಜಿಒ) ಭಾರತದ ವಿವಿಧ ರಕ್ಷಣಾ ಸಂಸ್ಥೆಗಳೊಂದಿಗೆ ಮಾತುಕತೆ ಆರಂಭಿಸಿದ್ದು, ಬಹುಮುಖ್ಯ ಬಿಡಿಭಾಗಗಳ ಸ್ವದೇಶಿ ನಿರ್ಮಾಣಕ್ಕೆ, ಕಾರ್ಯತಂತ್ರ ರಚಿಸಲು ಮುಂದಾಗಿದ್ದಾರೆ. ಸೇನೆಯ ಮುಂಚೂಣಿ ಪಡೆಗಳಿಗೆ ಅಗತ್ಯ ಮದ್ದುಗುಂಡುಗಳು, ಮುಖ್ಯ ಬಿಡಿಭಾಗಗಳ ಪೂರೈಕೆ ಹೊಣೆ ಎಂಜಿಒ ಅವರದ್ದಾಗಿದೆ. ಸಾಮಾನ್ಯವಾಗಿ ವಿದೇಶಗಳಿಂದ ಎಂಜಿಒ ಮತ್ತು ಒಎಫ್ಬಿಗಳು ವಾರ್ಷಿಕ 10 ಸಾವಿರ ಕೋಟಿ ರೂ.ಗಳ ಬಿಡಿಭಾಗಗಳನ್ನು ಸೇನೆಗೆ ಖರೀದಿ ಮಾಡುತ್ತವೆ.
ಸೇನೆಗೆ ಬೇಕಾದ ಬಹುಮುಖ್ಯ ಸಲಕರಣೆ, ಅವುಗಳ ಬಿಡಿಭಾಗಗಳ ಪೂರೈಕೆ ರಷ್ಯಾದಿಂದ ಆಗುತ್ತಿದ್ದು, ಆದರೆ ಅಲ್ಲಿಂದ ರವಾನೆ ವಿಳಂಬವಾಗುತ್ತದೆ. ಇದರಿಂದ ಸರಿಯಾಗಿ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂಬುದು ಸೇನೆಯ ಅಳಲು. ಸದ್ಯ ಭಾರತದಲ್ಲೇ ಬಿಡಿಭಾಗಗಳ ತಯಾರಿಕೆ ಮತ್ತು ಸ್ವದೇಶೀಕರಣ ಪ್ರಕ್ರಿಯೆಯಿಂದ ಸೇನಾ ಕಾರ್ಯಾಚರಣೆ ಸಿದ್ಧತೆಯ ಮಧ್ಯದ ಅಂತರ ತಗ್ಗಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಸೇನೆ ಈಗಾಗಲೇ ಕಿರು, ಸಣ್ಣ, ಮಧ್ಯಮ ಬಿಡಿಭಾಗಗಳನ್ನು ತಾನಾಗೇ ತಯಾರು ಮಾಡಲು ಚಿಂತಿಸಿದೆ. ಈ ಬಗ್ಗೆ ವ್ಯಾಪಕ ಮಾತುಕತೆಗಳು ನಡೆದಿದ್ದು, ಯೋಜನೆಯ ಅಂತಿಮ ನೀಲನಕ್ಷೆ ಮುಂದಿನೆರಡು ವಾರದಲ್ಲಿ ಸಿದ್ಧವಾಗಲಿದೆ. ಸೇನೆ ಸ್ವದೇಶಿ ಬಿಡಿಭಾಗಗಳನ್ನು ಪಡೆಯುವುದು ಮತ್ತು ಇಲ್ಲಿಯೇ ತಯಾರಿಕೆಗೆ ಬೆಂಬಲ ನೀಡುವುದರಿಂದ ಭಾರೀ ಪ್ರಮಾಣದಲ್ಲಿ ವಿದೇಶಿ ವೆಚ್ಚಗಳನ್ನು ತಗ್ಗಿಸಲಿದೆ. ಕಳೆದ ಎಪ್ರಿಲ್‌ನಲ್ಲಿ ಸೇನಾ ಕಮಾಂಡರ್‌ಗಳ ನಿರಂತರ ಸಭೆಗಳು ನಡೆದಿದ್ದು, ಹೆಚ್ಚುತ್ತಿರುವ ಬಾಹ್ಯ ಸವಾಲುಗಳು, ಯುದ್ಧ ಸಿದ್ಧತೆ ಹೆಚ್ಚಳಗೊಳಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಸಲಾಗಿತ್ತು. ಈ ವೇಳೆ ಅಗತ್ಯ ವಸ್ತುಗಳ ತ್ವರಿತ ಪೂರೈಕೆ, ಪರ್ಯಾಯ ಕ್ರಮ ಆಲೋಚಿಸುವ ಬಗ್ಗೆ ಸರಕಾರಕ್ಕೆ ಸೇನೆ ಒತ್ತಡ ಹೇರಿತ್ತು.
ಮಿಗ್-35 ಮಾರಾಟಕ್ಕೆ ರಷ್ಯಾ ಮುಂದು: ಭಾರತೀಯ ವಾಯುಪಡೆಗೆ ಹೊಸ, ಅತ್ಯಾಧುನಿಕ ಮಿಗ್-35 ಮಾದರಿ ವಿಮಾನಗಳನ್ನು ಮಾರಾಟ ಮಾಡಲು ರಷ್ಯಾ ಆಸಕ್ತಿ ತೋರಿಸಿದೆ. ಇಲ್ಲಿ ನಡೆಯುತ್ತಿರುವ ಎಂಎಕೆಎಸ್ 2017 ಏರ್‌ಷೋ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಷ್ಯನ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ ಮಿಗ್‌ನ ಮುಖ್ಯ ನಿರ್ದೇಶಕ ಇಲ್ಯಾ ತಾರೆÕಂಕೋ ಅವರು, “ಭಾರತಕ್ಕೆ ಮಿಗ್ ಮಾರಾಟ ಮಾಡಲು ಹೆಚ್ಚಿನ ಆಸಕ್ತಿ ಹೊಂದಿರುವುದಾಗಿ ಹೇಳಿದ್ದಾರೆ. ಮಿಗ್-35 ಅಮೆರಿಕದ 5ನೇ ತಲೆಮಾರಿನ ಯುದ್ಧವಿಮಾನ ಎಫ್-35ಗಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ನಾವು ಭಾರತೀಯ ವಾಯುಪಡೆಯ ಪೂರೈಕೆ ಗುತ್ತಿಗೆ ಪಡೆಯಲು ಮುಂದಾಗಿದ್ದು, ಈ ಬಗ್ಗೆ ಕಾರ್ಯತತ್ಪರರಾಗಿದ್ದೇವೆ ಎಂದು ಹೇಳಿದ್ದಾರೆ. ಇದೇ ಮಾದರಿಯ ಯುದ್ಧವಿಮಾನಗಳಿಗೆ ಹೋಲಿಸಿದರೆ ಮಿಗ್-35 ಶೇ.20ರಿಂದ ಶೇ.25ರಷ್ಟು ಕಡಿಮೆ ದರ ಹೊಂದಿದ್ದು, ಭಾರತದ ತಾಂತ್ರಿಕ ಅಗತ್ಯತೆ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.
ಮಿಗ್-35 ಕುರಿತಾಗಿ ನಾವೀಗ ಮಾತುಕತೆ ಹಂತದಲ್ಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಪಾಕ್‌ಗೆ ವೆಂಕಯ್ಯ ಎಚ್ಚರಿಕೆ
“ಭಯೋತ್ಪಾದನೆಯಿಂದ ಏನೂ ಪ್ರಯೋಜನವಿಲ್ಲ. 1971ರ ಯುದ್ಧದಲ್ಲಿ ಏನಾಗಿತ್ತು ಎಂಬುದನ್ನು ಪಾಕ್ ನೆನಪಿಸಿಕೊಳ್ಳ ಬೇಕು. ಪಾಕ್‌ನ ಪ್ರತೀ ಕೃತ್ಯಗಳಿಗೂ ಭಾರತ ತಕ್ಕ ಉತ್ತರ ನೀಡಿದೆ. 13 ದಿನಗಳ ಯುದ್ಧದ ಬಳಿಕ ಪಾಕ್ ಶರಣಾಗಿದ್ದು, ಬಾಂಗ್ಲಾದೇಶ ಉದಯವಾಯಿತು’ ಹೀಗೆಂದು ನಿರಂತರ ಕಿರಿಕ್ ಮಾಡುತ್ತಿರುವ ಪಾಕ್‌ಗೆ ಎಚ್ಚರಿಕೆ ನೀಡಿದ್ದು, ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಎಂ. ವೆಂಕಯ್ಯ ನಾಯ್ಡು. ದಿಲ್ಲಿಯಲ್ಲಿ ನಡೆದ ಕಾರ್ಗಿಲ್ ಪರಾಕ್ರಮ ಪರೇಡ್‌ನಲ್ಲಿ ಮಾತನಾಡುತ್ತ, ನಮ್ಮ ನೆರೆಯ ದೇಶ ಶಾಂತವಾಗಿ ಕೂರುವ ಜಾಯಮಾನದ್ದಲ್ಲ. ನೆರೆಯ ದೇಶಗಳನ್ನೂ ಅದು ಹಾಗೆ ಇರಲು ಬಿಡುವುದಿಲ್ಲ. ಆದರೆ ನಾವು ಒಗ್ಗಟ್ಟಾಗಿದ್ದೇವೆ ಎಂಬುದನ್ನು ಅವರು ಅರಿತುಕೊಳ್ಳಬೇಕು. ನಾವು ಒಗ್ಗಟ್ಟಾಗಿ ತಿರುಗೇಟು ನೀಡಲು ಸಿದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.