Advertisement

ಗಡಿಯಲ್ಲಿ ಭಾರತ –ಚೀನೀ ಸೈನಿಕರ ಮುಖಾಮುಖಿ ; ಎರಡೂ ದೇಶಗಳ ಸೈನಿಕರಿಗೆ ಗಾಯ

02:33 AM May 11, 2020 | Hari Prasad |

ಹೊಸದಿಲ್ಲಿ: ಉತ್ತರ ಸಿಕ್ಕಿಂನಲ್ಲಿರುವ ‘ನಾಕು ಲಾ’ ಎಂಬ ಪ್ರಾಂತ್ಯದಲ್ಲಿ ಭಾರತ ಮತ್ತು ಚೀನ ಸೈನಿಕರು ಕೈಕೈ ಮಿಲಾಯಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

Advertisement

ಘಟನೆಯಲ್ಲಿ ನಾಲ್ವರು ಭಾರತೀಯ ಸೈನಿಕರು ಹಾಗೂ ಏಳು ಚೀನ ಸೈನಿಕರು ಗಾಯಗೊಂಡಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಭಾರತೀಯ ಸೇನೆ, “ಸಿಕ್ಕಿಂನ ಉತ್ತರ ಭಾಗದಲ್ಲಿರುವ “ನಾಕು ಲಾ’ದಲ್ಲಿ ಗಡಿ ಕಾಯುತ್ತಿದ್ದ ಎರಡೂ ಕಡೆಯ ಸೈನಿಕರು ಗಡಿ ರೇಖೆಯ ವಿಚಾರವಾಗಿ ಜಗಳವಾಡಿದ್ದಾರೆ. ಪರಸ್ಪರ ಕೈ ಮಿಲಾಯಿಸಿದ್ದರಿಂದ ಎರಡೂ ಕಡೆಯ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಜತಾಂತ್ರಿಕ ಮಾತುಕತೆಯ ನಂತರ ಗಲಾಟೆ ಅಂತ್ಯಗೊಂಡಿದೆ’ ಎಂದು ತಿಳಿಸಿದೆ.

ಏನಿದು ‘ನಾಕು ಲಾ’?: ‘ನಾಕು ಲಾ’ ಎಂಬುದು ಎರಡೂ ದೇಶಗಳನ್ನು ಸಂಪರ್ಕಿಸುವ ಒಂದು ಕಾಲುದಾರಿ ಸಾಗಿ ಹೋಗುವ ಜಾಗ. ಸಮುದ್ರಮಟ್ಟಕ್ಕಿಂತ ಸುಮಾರು 5,000 ಅಡಿಗಳಷ್ಟು ಎತ್ತರದಲ್ಲಿದೆ.

ಇಲ್ಲಿ ಭಾರತ ಮತ್ತು ಚೀನಾ ಸೈನಿಕರು ಪರಸ್ಪರ ಕಾವಲು ಕಾಯುತ್ತಿರುತ್ತಾರೆ. ಸಾಮಾನ್ಯವಾಗಿ ಭಾರತ, ಚೀನ ನಡುವಿನ ನೈಜ ಗಡಿ ರೇಖೆ (ಎಲ್‌ಎಸಿ) ಬಳಿಯಲ್ಲಿ ಆಗಾಗ ಎರಡೂ ದೇಶಗಳ ಸೈನಿಕರು ವಾದ-ವಿವಾದಗಳಲ್ಲಿ ತೊಡಗಿದ್ದುಂಟು. ಆದರೆ, ‘ನಾಕು ಲಾ’ ಸ್ಥಳ ಉತ್ತರ ಸಿಕ್ಕಿಂನಲ್ಲಿ ಹಿಂದೆ ಯಾವಾಗಲೂ ಇಂಥ ಘಟನೆ ನಡೆದಿರಲಿಲ್ಲ. ಈ ಪ್ರದೇಶದಲ್ಲಿ ಹೀಗಾಗಿರುವುದು ಇದೇ ಮೊದಲು.

Advertisement

ಸೈನಿಕರ ಕ್ಲಾಶ್‌: ಒಂದು ಫ್ಲ್ಯಾಶ್‌ಬ್ಯಾಕ್‌
– 2017ರ ಜೂನ್‌ 16ರಂದು ಭಾರತ-ಚೀನ ಗಡಿಯ ವಿವಾದಾತ್ಮಕ ಜಾಗವಾದ ಡೋಕಲಂನಲ್ಲಿ ಚೀನದ ಸೈನ್ಯವು ಕಟ್ಟಡವೊಂದನ್ನು ನಿರ್ಮಿಸಲು ಹೊರಟಿತ್ತು. ಆಗ, ಭಾರತದ ಸೈನಿಕರು ಅದನ್ನು ತಡೆದಾಗ ಎರಡೂ ಕಡೆಯ ಸೈನಿಕರ ನಡುವೆ ಜಗಳ ಏರ್ಪಟ್ಟಿತ್ತು. ವಿವಾದಿತ ಜಾಗದಲ್ಲಿ ಎರಡೂ ಬದಿಯ ಸೈನಿಕರು 73 ದಿನಗಳ ಕಾಲ ಮುಖಾಮುಖಿಯಾಗಿ ನಿಂತಿದ್ದರು. ಆ. 28ರಂದು ಈ ವಿವಾದ ಮುಕ್ತಾಯವಾಯಿತು.

– 2019ರಲ್ಲಿ “ಪಂಗ್ಯಾಂಗ್‌ ತ್ಸೋ’ ಸರೋವರದ ಬಳಿಯಲ್ಲಿ ಭಾರತ ಮತ್ತು ಚೀನದ ಸೈನಿಕರು ಪರಸ್ಪರ ಮುಖಾಮುಖಿಯಾಗಿದ್ದರು. ಆ ವಿವಾದ ಎರಡೂ ಕಡೆಯ ರಾಜತಾಂತ್ರಿಕ ಸಿಬಂದಿಯ ಮಾತುಕತೆ ಮೂಲಕ ಪರಿಹಾರವಾಯಿತು.

2018ರಲ್ಲಿ ಪ್ರಧಾನಿ ಮೋದಿ, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭಾಗವಹಿಸಿದ್ದ ಉಭಯ ದೇಶಗಳ ನಡುವಿನ ಅನಧಿಕೃತ ಸಮ್ಮೇಳನದಲ್ಲಿ ಭಾರತ-ಚೀನ ಸೈನಿಕರಿಗೆ ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೆಲವಾರು ಮಾರ್ಗಸೂಚಿಗಳನ್ನು ನಿಗದಿಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next