ಚೆನ್ನೈ: ಸೇನಾಪಡೆಗಳ (ಸಿಡಿಎಸ್) ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಸೇನಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಊಟಿಯಲ್ಲಿ ಪತನಗೊಂಡಿರುವ ಘಟನೆ ಬುಧವಾರ(ಡಿಸೆಂಬರ್ 08) ಮಧ್ಯಾಹ್ನ ಸಂಭವಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಕೇಂದ್ರ ನಮ್ಮ ಎಲ್ಲಾ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಮುಂದುವರಿಕೆ: ರೈತ ಸಂಘಟನೆ
ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ ಮೂವರು ಅಧಿಕಾರಿಗಳನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಅಧಿಕಾರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಸೇನಾ ಹೆಲಿಕಾಪ್ಟರ್ ನಲ್ಲಿ ಜನರಲ್ ಬಿಪಿನ್ ರಾವತ್, ಅವರ ಸಿಬಂದಿಗಳು ಹಾಗೂ ಕುಟುಂಬ ಸದಸ್ಯರು ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿ ತಿಳಿಸಿದೆ. ಘಟನೆಯಲ್ಲಿ ಬಿಪಿನ್ ರಾವತ್ ಸೇರಿದಂತೆ ಮೂವರನ್ನು ರಕ್ಷಿಸಲಾಗಿದ್ದು, ಐದಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ. ದುರಂತದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದನ್ನು ಇನ್ನಷ್ಟೇ ನಿಖರವಾಗಿ ತಿಳಿದುಬರಬೇಕಾಗಿದೆ.
ಸೇನಾಪಡೆಗಳು ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ರಕ್ಷಣಾ ಸಿಬಂದಿಗಳು ದೆಹಲಿಯಿಂದ ತಮಿಳುನಾಡಿನ ಸುಲೂರ್ ಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಇಂಡಿಯನ್ ಏರ್ ಫೋರ್ಸ್ ಖಚಿತಪಡಿಸಿದೆ.
ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ರಕ್ಷಿಸಲಾಗಿದೆ. ಗಾಯಗೊಂಡ ಸೇನಾ ಹಿರಿಯ ಅಧಿಕಾರಿಗಳನ್ನು ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಕಂಟೋನ್ಮೆಂಟ್ ಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.
ಹೆಚ್ಚಿನ ವರದಿ ನಿರೀಕ್ಷಿಸಲಾಗಿದೆ…