Advertisement

ಉಗ್ರರಿಂದ ಅಸಾಂಪ್ರದಾಯಿಕ ಶಸ್ತ್ರಾಸ್ತ್ರ ಬಳಕೆ: ಜ|ರಾವತ್‌

04:33 PM Jan 12, 2018 | udayavani editorial |

ಹೊಸದಿಲ್ಲಿ : ಸರಕಾರೇತರ ಪಾತ್ರಧಾರಿಗಳು ಸದ್ಯೋ ಭವಿಷ್ಯದಲ್ಲಿ ರಾಸಾಯನಿಕ, ಜೈವಿಕ, ರೇಡಿಯೋಲಾಜಿಕಲ್‌ ಮತ್ತು ನ್ಯೂಕ್ಲಿಯರ್‌ (CBRN) ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆಗಳಿವೆ ಎಂದು ದೇಶದ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಎಚ್ಚರಿಸಿದ್ದಾರೆ.

Advertisement

ಶತ್ರು ದೇಶಗಳ ಸರಕಾರೇತರ ಪಾತ್ರಧಾರಿಗಳು, ಮುಖ್ಯವಾಗಿ ಉಗ್ರರು ಅಥವಾ ಉಗ್ರರ ವೇಷದಲ್ಲಿರುವ ಶತ್ರು ಸೈನಿಕರು, CBRN ಶಸ್ತ್ರಾಸ್ತ್ರಗಳನ್ನು ಬಳಸುವಲ್ಲಿನ ಬೆದರಿಕೆಗಳು ಈಗ ಬಹಳ ವೇಗದಲ್ಲಿ ವಾಸ್ತವದತ್ತ ಸಾಗುತ್ತಿವೆ. ಸಿಬಿಆರ್‌ಎನ್‌ ಅಸ್ತ್ರಗಳು ಬಳಸಲ್ಪಟ್ಟಲ್ಲಿ ಅದರಿಂದ ಮಾನವರ ಮೇಲೆ ಮಾತ್ರವಲ್ಲದೆ ಆಸ್ತಿಪಾಸ್ತಿಗಳ ಮೇಲೆ, ನೈಸರ್ಗಿಕ ಸಿರಿ ಸಂಪತ್ತಿನ ಮೇಲೆ ಆಗುವ ಹಾನಿ, ದುಷ್ಪರಿಣಾಮ ಅತ್ಯಪಾರ ಎಂದು ಜನರಲ್‌ ರಾವತ್‌ ಹೇಳಿದರು. 

ಇಂತಹ ಅಸಾಂಪ್ರದಾಯಿಕ ಸಮರಗಳನ್ನು ಎದುರಿಸಲು ದೇಶದ ಸೇನೆಯ ಅತ್ಯಾಧುನಿಕ ತಂತ್ರಜ್ಞಾನ ಆಧರಿತ ಶಸ್ತ್ರಾಸ್ತ್ರಗಳು ಇರುವುದು ಅತ್ಯಗತ್ಯ. ಇದನ್ನು ದೇಶದ ಹೆಮ್ಮೆಯ ಡಿಆರ್‌ಡಿಓ ಸಂಸ್ಥೆಯ ಮನಗಂಡು ಆ ನಿಟ್ಟಿನಲ್ಲಿ ದೀರ್ಘಾವಧಿಯ ಸಂಶೋಧನ ಯೋಜನೆಯನ್ನು ಹಾಕಿಕೊಂಡು ಕಾರ್ಯೋನ್ಮುಖವಾಗಬೇಕು ಎಂದು ಜನರಲ್‌ ರಾವತ್‌ ಹೇಳಿದರು. 

ಯಾವತ್ತೂ ಅನುಮಾನಾಸ್ಪದವಾಗಿರುವ ಚೀನ ಮತ್ತು ಸದಾ ಅಸ್ಥಿರತೆಯಿಂದ ಕೂಡಿರುವ ಪಾಕಿಸ್ಥಾನ ಭಾರತದ ಭದ್ರತಾ ವ್ಯವಸ್ಥೆಗಳಿಗೆ ಪ್ರಮುಖ ಕಳವಳಕಾರಿ ಬೆದರಿಕೆಗಳಾಗಿವೆ. ಪಾಕಿಸ್ಥಾನದ ಸಮೂಹ ನಾಶಕ ಅಣ್ವಸ್ತ್ರಗಳು ಉಗ್ರರ ಕೈವಶವಾದಾವು ಎಂಬ ಭಯ ಅಮೆರಿಕಕ್ಕೆ ಈ ಹಿಂದೆಯೇ ಇತ್ತು. ಅದೀಗ ನಿಜವಾಗುವತ್ತ ಪರಿಸ್ಥಿತಿ ಸಾಗಿದೆ ಎಂದು ರಾವತ್‌ ಎಚ್ಚರಿಸಿದರು. 

ಭಾರತ ಸೇನೆ ಈ ನಡುವೆ ಎಲ್ಲ ಬಗೆಯ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಸಮರಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸದಾ ಕಟ್ಟೆಚ್ಚರದಿಂದ ಇದೆ ಎಂದು ರಾವತ್‌ ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next