ಹೊಸದಿಲ್ಲಿ : ಸಿಕ್ಕಿಂ ಗಡಿ ಪ್ರದೇಶದಲ್ಲಿನ ವಿವಾದಿತ ಡೋಕ್ಲಾಂ ನಲ್ಲಿ ಚೀನ ಸೇನೆ ಮತ್ತೆ ತನ್ನ ರಟ್ಟೆಯರಳಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತದ ಸೇನಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಿದೇಶ ಕಾರ್ಯದರ್ಶಿ ವಿಜಯ್ ಗೋಖಲೆ ಮತ್ತು ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಾಲ್ ಅವರು ಜತೆಗೂಡಿ ಈ ತಿಂಗಳ ಆದಿಯಲ್ಲಿ ರಹಸ್ಯವಾಗಿ ಭೂತಾನ್‌ಗೆ ಭೇಟಿ ನೀಡಿ ಅಲ್ಲಿನ ಉನ್ನತ ನಾಯಕರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ಅನೇಕ ಪ್ರಮುಖ ಮತ್ತು ವ್ಯೂಹಾತ್ಮಕ ವಿಷಯಗಳ ಬಗ್ಗೆ ಚರ್ಚಿಸಿರುವುದಾಗಿ ಈಗ ಗೊತ್ತಾಗಿದೆ.
ರಾಯಲ್ ಭೂತಾನ್ ಆರ್ಮಿ ವಶದಲ್ಲಿರುವ ಪ್ರದೇಶಗಳಲ್ಲಿ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅತಿಕ್ರಮಣ ಗಸ್ತು ತಿರುಗುತ್ತಿರುವ ಬಗ್ಗೆ ಗುಪ್ತಚರ ದಳ ಎಚ್ಚರಿಕೆ ನೀಡಿದ್ದು ಈ ಬಗ್ಗೆ ಭಾರತ ಚಿಂತಾಕ್ರಾಂತವಾಗಿದೆ ಎಂದು ಮೂಲಗಳು ಹೇಳಿವೆ.
ರಾಯಲ್ ಭೂತಾನ್ ಆರ್ಮಿಯ ವಶದಲ್ಲಿರುವ ಲ್ಹಾರಿಯೋಂಗ್, ಸಾರಿತಾಂಗ್, ಸಿಂಚುಲುಂಪಾ ಮತ್ತು ಪಾಂಗ್‌ಕಾ ಲಾ ಪ್ರದೇಶಗಳಲ್ಲಿ ಚೀನೀ ಸೇಯ ಅತಿಕ್ರಮಣದ ಗಸ್ತು ತಿರುಗುವಿಕೆ ಈಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಉಭಯ ದೇಶಗಳಿಗೆ ಕಳವಳದ ಸಂಗತಿಯಾಗಿದೆ.
ರಾಯಲ್ ಭೂತಾನ್ ಆರ್ಮಿಯ ಈ ಪ್ರದೇಶಗಳಲ್ಲಿ ಮಾತ್ರವಲ್ಲದೆ ವಿವಾದಿತ ಉತ್ತರ ಡೋಕ್ಲಾಂ ನಲ್ಲಿ ಚೀನೀ ಸೇನೆ ಫೈಟರ್ ಜೆಟ್‌ಗಳನ್ನು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ದಿನವಹಿ ನೆಲೆಯಲ್ಲಿ ಅತಿಕ್ರಮಣ ಗಸ್ತು ನಡೆಸುತ್ತಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.
ಭಾರತ – ಚೀನ ಸೇನೆ 2017ರ ಜೂನ್ 16ರಿಂದ ತೊಡಗಿ 73 ದಿನಗಳ ಕಾಲ ಮುಖಾಮುಖೀಯಾಗಿದ್ದ ಡೋಕ್ಲಾಂ ಟ್ರೈ ಜಂಕ್ಷನ್ ಪ್ರದೇಶದಲ್ಲಿ ಚೀನೀ ಸೇನೆ ಮತ್ತು ತನ್ನ ರಟ್ಟೆಯನ್ನರಳಿಸುತ್ತಿದೆ. ಅಂದು ಈ ವಿವಾದಿತ ಪ್ರದೇಶದಲ್ಲಿ ಚೀನ ಸೇನೆ ನಡೆಸುತ್ತಿದ್ದ ರಸ್ತೆ ಕಾಮಗಾರಿಯನ್ನು ಭಾರತ ಸೇನೆ ಪಟ್ಟು ಹಿಡಿದು ತಡೆದಿತ್ತು.
ಉತ್ತರ ಡೋಕ್ಲಾಂ ನಲ್ಲಿ ನ ಮುಕ್ತ ಸಂಪರ್ಕದ ಆಳದ ಕಂದಕದ ಉದ್ದಕ್ಕೂ ಪಿಎಲ್‌ಎ 25 ಸಣ್ಣ – ಮಧ್ಯ ಗಾತ್ರದ ಟೆಂಟ್‌ಗಳನ್ನು ನಿರ್ಮಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.