ಜಮ್ಮು-ಕಾಶ್ಮೀರ: ಲಡಾಖ್ ಗಡಿಯಲ್ಲಿ ಚೀನಾ ಸೇನೆ ಸಂಘರ್ಷ ಮುಂದುವರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರಾವಣೆ ಅವರು ಗುರುವಾರ (ಸೆಪ್ಟೆಂಬರ್ 3,2020) ಲಡಾಖ್ ಪ್ರದೇಶಕ್ಕೆ ಭೇಟಿ ನೀಡಿ ಸೇನೆಯ ರಕ್ಷಣಾ ವ್ಯವಸ್ಥೆಯ ಪರಿಶೀಲನೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಸೇನಾ ಮೂಲಗಳ ಪ್ರಕಾರ, ಲಡಾಖ್ ಗೆ ಎರಡು ದಿನಗಳ ಭೇಟಿ ನೀಡಿರುವ ಎಂಎಂ ನರಾವಣೆ ಅವರಿಗೆ ಎಲ್ ಎಸಿಯಲ್ಲಿನ ವಾಸ್ತವ ಸ್ಥಿತಿ ಬಗ್ಗೆ ಹಿರಿಯ ಕಮಾಂಡರ್ ಗಳು ವಿವರವಾದ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದೆ.
ಲಡಾಖ್ ನ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿರುವ ವ್ಯೂಹಾತ್ಮಕ ಎತ್ತರದ ಪ್ರದೇಶಗಳನ್ನು ಇತ್ತೀಚೆಗಷ್ಟೇ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ ಭಾರತೀಯ ಯೋಧರು ಮತ್ತೊಂದೆಡೆ ಸರೋವರದ ಉತ್ತರ ದಿಕ್ಕಿನ ದಂಡೆಯಲ್ಲಿರುವ ಎತ್ತರದ ಪ್ರದೇಶಗಳನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಬೆಳವಣಿಗೆ ನಂತರ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ತಾರಕಕ್ಕೇರತೊಡಗಿತ್ತು. ಈ ನಿಟ್ಟಿನಲ್ಲಿ ಆರ್ಮಿ ಮುಖ್ಯಸ್ಥ ಎಂಎಂ ನರಾವಣೆ ಲಡಾಖ್ ಗೆ ಭೇಟಿ ನೀಡಿದ್ದಾರೆ ಎಂದು ವರದಿ ವರದಿ ತಿಳಿಸಿದೆ.
ಆಗಸ್ಟ್ 29 ಮತ್ತು 30ರಂದು ರಾತ್ರಿ ಲಡಾಖ್ ನ ಪ್ಯಾಂಗಾಂಗ್ ದಂಡೆ ಬಳಿ ಚೀನಾದ ಸೇನೆ ವಿರುದ್ಧ ಭಾರತೀಯ ಸೇನೆ ಐತಿಹಾಸಿಕ ಯಶಸ್ಸು ಗಳಿಸಿತ್ತು ಎಂದು ಡಿಎನ್ ಎ ವರದಿ ವಿವರಿಸಿದೆ. ಪ್ಯಾಂಗಾಂಗ್ ನ ದಕ್ಷಿಣ ಸರೋವರ ಪ್ರದೇಶದ ಬ್ಲ್ಯಾಕ್ ಟಾಪ್ ಪ್ರದೇಶದತ್ತ ಚೀನಾ ಸೈನಿಕರು ತೆರಳುತ್ತಿರುವುದನ್ನು ಗಮಿಸಿದ್ದ ಭಾರತೀಯ ಸೇನಾ ಪಡೆ ಅವರನ್ನು ತಡೆಯುವಲ್ಲಿ ಯಶಸ್ವಿಯಾಗಿತ್ತು ಎಂದು ವರದಿ ತಿಳಿಸಿದೆ.
ಚೀನಾ ಸೇನೆಯ ಭೂ ಆಕ್ರಮಣ ಕ್ಷಿಪ್ರವಾಗಿ ತಡೆದ ಭಾರತೀಯ ಸೇನಾ ಪಡೆ ಬ್ಲ್ಯಾಕ್ ಟಾಪ್ ಅನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವುಯಾಗಿತ್ತು. ಈ ಸಂದರ್ಭದಲ್ಲಿ ಉಭಯ ದೇಶಗಳ ಯೋಧರ ನಡುವೆ ಘರ್ಷಣೆ ನಡೆದಿತ್ತು ಎಂದು ವರದಿ ತಿಳಿಸಿದ್ದವು. ಆದರೆ ಭಾರತೀಯ ಸೇನೆ ಈ ವರದಿಯನ್ನು ಸಲ್ಲಗಳೆದಿದೆ.
ಈ ಬೆಳವಣಿಗೆ ನಂತರ ಚೀನಾ ಭಾರತದ ವಿರುದ್ಧ ಆರೋಪಗಳ ಸುರಿಮಳೆಗೈದಿತ್ತು. ಅಲ್ಲದೇ ಪಿಎಲ್ ಎನ ಎಲ್ಲಾ ತಂತ್ರಗಾರಿಕೆ, ಯುದ್ಧ ಸ್ಥಿತಿ ಎದುರಿಸಲು ಭಾರತ ಕೂಡಾ ತನ್ನ ಸೇನೆಯನ್ನು ಗಡಿಯಲ್ಲಿ ನಿಯೋಜಿಸಿದೆ.