ನವದೆಹಲಿ:ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಮೇಲೆ ದೊಡ್ಡ ಮಟ್ಟದಲ್ಲಿಯೇ ಕಾರ್ಯಾಚರಣೆ ನಡೆಸಲು ಸಿದ್ಧವಾಗಿದೆ. ಇದು ನಮ್ಮ ಅಧಿಕಾರ ಎಂದು ಭಾರತೀಯ ಸೇನಾಪಡೆಯ ನೂತನ ಮುಖ್ಯಸ್ಥ ಎಂಎಂ ನಾರಾವಣೆ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಜನರಲ್ ನಾರಾವಣೆ ಭಾರತದ 28ನೇ ಸೇನಾ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಪಾಕಿಸ್ತಾನ ಉಗ್ರವಾದಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೆ, ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಇರುವ ಉಗ್ರರ ಅಡಗುತಾಣಗಳ ಮೇಲೆ ಯಾವುದೇ ಮುಲಾಜಿಲ್ಲದೆ ದಾಳಿ ನಡೆಸುವ ಹಕ್ಕನ್ನು ಭಾರತ ಹೊಂದಿದೆ ಎಂದು ಜನರಲ್ ನಾರಾವಣೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು.
ಈಗಾಗಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರಲ್ಲಿ ಪಿಒಕೆ ಮತ್ತು 2019ರಲ್ಲಿ ಬಾಲಕೋಟ್ ಮೇಲೆ ಸರ್ಜಿಕಲ್ ದಾಳಿ ನಡೆಸಿತ್ತು. ಅಲ್ಲದೇ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ರದ್ದುಪಡಿಸಿದ ನಂತರ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿ ಮುಖಭಂಗ ಅನುಭವಿಸಿತ್ತು.
ಏತನ್ಮಧ್ಯೆ ವಿದೇಶಾಂಗ ವ್ಯವಹಾರ ಸಚಿವ ಎಸ್.ಜೈಶಂಕರ್ ಪಿಒಕೆ ಭಾರತದ ಭಾಗವಾಗಿದೆ. ಒಂದು ದಿನ ನಾವು ಪಿಒಕೆ ಮೇಲೆ ಹಕ್ಕು ಸಾಧಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಜನರಲ್ ಎಂಎಂ ನಾರಾವಣೆ ಅವರನ್ನು ನ್ಯೂಸ್ ಚಾನೆಲ್ ವೊಂದು ನಡೆಸಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದು, ಗಡಿ ನಿಯಂತ್ರಣ ರೇಖೆ ಬಳಿ ನಾವು ನಮ್ಮ ಸೇನೆಯನ್ನು ನಿಯೋಜಿಸಿದ್ದೇವೆ. ಅಲ್ಲದೇ ನಮ್ಮಲ್ಲಿ ಹಲವು ಯೋಜನೆಗಳನ್ನು ಸಿದ್ದಪಡಿಸಿಕೊಂಡಿದ್ದೇವೆ. ಒಂದು ವೇಳೆ ಅವಶ್ಯಕತೆ ಬಂದಲ್ಲಿ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದರು.
ಪಿಒಕೆ ಮೇಲೆ ಕಾರ್ಯಾಚರಣೆ ನಡೆಸುತ್ತೀರಾ ಎಂಬ ಖಚಿತ ಪ್ರಶ್ನೆಗೆ ಹೌದು ಅದು ನಮ್ಮ ಹಕ್ಕು ಎಂದು ಪ್ರತಿಕ್ರಿಯೆ ನೀಡಿದ್ದು, ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ, ಕದನ ವಿರಾಮ ಉಲ್ಲಂಘನೆ ಮುಂದುರಿದಲ್ಲಿ ಪಿಒಕೆ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸುವ ಸಾಧ್ಯತೆ ದಟ್ಟ ಎಂದು ಇಂಡಿಯಾ ಟುಡೇ ವರದಿ ವಿಶ್ಲೇಷಿಸಿದೆ.