Advertisement

ರಾವತ್‌ ಹೇಳಿಕೆ ; ರಾಜಕೀಯ ಮಸೂರದಿಂದಾಚೆಗೆ ಇರುವ ವಾಸ್ತವಗಳು

01:24 PM Feb 24, 2018 | Sharanya Alva |

ಈಶಾನ್ಯ ಭಾಗದ ಭದ್ರತೆಗೆ ಸವಾಲಾಗಿರುವ ಅಕ್ರಮ ವಲಸೆ ಹಾಗೂ ಅಶಾಂತಿಯ ವಾತಾವರಣದ ಕುರಿತು ಭೂಸೇನೆಯ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ನೀಡಿರುವ ಹೇಳಿಕೆಯೊಂದು ಈಗ ಪೂರ್ಣ ಪ್ರಮಾಣದ ರಾಜಕೀಯ ತಿರುವು ಪಡೆದುಕೊಂಡು ಕೆಸರೆರಚಾಟಕ್ಕೆ ಕಾರಣವಾಗಿದೆ.
ಬುಧವಾರ ದಿಲ್ಲಿಯಲ್ಲಿ ನಡೆದ ಈಶಾನ್ಯ ಭಾರತದ ಭದ್ರತೆಯ ಕುರಿತಾದ ಕಾರ್ಯಾಗಾರದಲ್ಲಿ ಮಾತನಾಡಿದ ಸಂದರ್ಭದಲ್ಲಿ ಅಸ್ಸಾಂ ರಾಜ್ಯಕ್ಕೆ ಬಾಂಗ್ಲಾದೇಶಿಗರು ಅಕ್ರಮವಾಗಿ ವಲಸೆ ಬಂದಿರುವ ಪರಿಣಾಮವಾಗಿ ಅಲ್ಲಿನ ಜನಸಂಖ್ಯೆ ಹಂಚಿಕೆಯಲ್ಲಿ ವ್ಯತ್ಯಾಸವುಂಟಾಗಿರುವ ಕುರಿತು ಗಮನ ಸೆಳೆದಿದ್ದರು. ಅಕ್ರಮ ಬಾಂಗ್ಲಾ ವಲಸಿಗರಿಂದಾಗಿ ಬದ್ರುದ್ದೀನ್‌ ಅಜ್ಮಲ್‌ ನೇತೃತ್ವದ ಆಲ್‌ ಇಂಡಿಯಾ ಯುನೈಟೆಡ್‌ ಡೆಮಕ್ರಾಟಿಕ್‌ ಫ್ರಂಟ್‌ ಪಕ್ಷ ತ್ವರಿತವಾಗಿ ಪ್ರವರ್ಧಮಾನಕ್ಕೆ ಬಂದಿದೆ ಎಂದಿರುವ ರಾವತ್‌ ಈ ಪಕ್ಷದ ಬೆಳವಣಿಗೆಯನ್ನು ಮನವರಿಕೆ ಮಾಡಲು ಬಿಜೆಪಿಯ ಬೆಳವಣಿಗೆಯ ಹೋಲಿಕೆ ನೀಡಿದ್ದರು. ಈಶಾನ್ಯ ರಾಜ್ಯಗಳಲ್ಲಿ ಪಿಡುಗಾಗಿ ಪರಿಣಮಿಸಿರುವ ಅಕ್ರಮ ವಲಸೆಗೆ ಚೀನದ ನೆರವಿನಿಂದ ಪಾಕಿಸ್ಥಾನ ಕುಮ್ಮಕ್ಕು ನೀಡುತ್ತಿದೆ.

Advertisement

ಇದೊಂದು ರೀತಿಯಲ್ಲಿ ನೆರೆಯ ದೇಶಗಳು ನಮ್ಮ ವಿರುದ್ಧ ನಡೆಸುತ್ತಿರುವ ಛಾಯಾ ಸಮರ. ಇದೇ ಭಾಷಣದಲ್ಲಿ ಅವರು ಈಶಾನ್ಯ ರಾಜ್ಯಗಳ ಭದ್ರತೆ, ಅಭಿವೃದ್ಧಿ ಮತ್ತಿತರ ವಿಚಾರಗಳ ಕುರಿತು ಮಾತನಾಡಿದ್ದರೂ ಮಾಧ್ಯಮಗಳು ಬರೀ ಎಐಯುಡಿಎಫ್ ಕುರಿತು ಹೇಳಿರುವ ಮಾತುಗಳನ್ನು ಮಾತ್ರ ಹೆಕ್ಕಿ ತೆಗೆದಿರುವುದರಿಂದ ಸಹಜವಾಗಿಯೇ ವಿವಾದ ಸೃಷ್ಟಿಯಾಗಿದೆ ಹಾಗೂ ಇಂತಹ ಅವಕಾಶಕ್ಕಾಗಿ ಕಾದು ಕುಳಿತಿರುವ ಓವೈಸಿಯಂತಹ ನಾಯಕರು ರಾವತ್‌ ಮತ್ತು ಬಿಜೆಪಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಸೇವೆಯಲ್ಲಿರುವ ಸೇನಾ ದಂಡನಾಯಕರಾಗಿ ರಾವತ್‌ ಒಂದು ನಿರ್ದಿಷ್ಟ ಕೋಮು ಮತ್ತು ಪಕ್ಷವನ್ನು ಗುರಿ ಮಾಡಿಕೊಂಡು ಹೇಳಿಕೆ ನೀಡಿರುವುದು ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಸೇನಾ ಮುಖ್ಯಸ್ಥರು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಹೇಳಿಕೆ ನೀಡುವುದು ಸರ್ವಥಾ ಸರಿಯಲ್ಲ. ಇದರಿಂದ ಸೇನೆಯ ನಿಷ್ಪಕ್ಷಪಾತ ಮತ್ತು ದೇಶ ಹಾಗೂ ರಾಷ್ಟ್ರೀಯತೆಗೆ ಮಾತ್ರ ಬದ್ಧವಾಗಿರುವ ನಿಲುವಿಗೆ ಚ್ಯುತಿ ಬರುವ
ಸಾಧ್ಯತೆಯಿದೆ.

ಸೇನಾ ಮುಖ್ಯಸ್ಥ ರಾಜಕೀಯ ವಿಚಾರಗಳಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಅದನ್ನು ನೋಡಿಕೊಳ್ಳಲು ಸರಕಾರ, ವಿಪಕ್ಷ, ಸಂವಿಧಾನ, ನ್ಯಾಯಾಲಯ ಇದೆ. ಸೇನೆಯ ಕೆಲಸವೇನಿದ್ದರೂ ದೇಶದ ಮತ್ತು ಪ್ರಜೆಗಳ ರಕ್ಷಣೆ. ಇದರಲ್ಲಿ ಜಾತಿ, ಧರ್ಮ, ಪಕ್ಷದ ಬೇಧ ಮಾಡುವ ಪ್ರಶ್ನೆಯೇ ಇಲ್ಲ. ಆದರೆ ಎಐಯುಡಿಎಫ್ ಕುರಿತು ನೀಡಿದ ಹೇಳಿಕೆಯನ್ನು ಬದಿಗಿರಿಸಿ ಉಳಿದ ವಿಚಾರಗಳತ್ತ ಗಮನಹರಿಸಿದರೆ ರಾವತ್‌ ಹೇಳಿರುವುದರಲ್ಲಿ ನಿಜವಿದೆ ಎಂದು ಅನ್ನಿಸುವುದಿಲ್ಲವೆ? ದೇಶದಲ್ಲಿ ಈಗ ಸುಮಾರು 2 ಕೋಟಿ ಅಕ್ರಮ ಬಾಂಗ್ಲಾ ಪ್ರಜೆಗಳು ಇದ್ದಾರೆ ಎಂದು ಕೆಲ ಸಮಯದ ಹಿಂದೆ ಸ್ವತಹ ಗೃಹ ಸಚಿವಾಲಯವೇ ಸಂಸತ್ತಿಗೆ ಮಾಹಿತಿ ನೀಡಿತ್ತು.ಚಿಕ್ಕ ನಗರಗಳು ಮತ್ತು ಹಳ್ಳಿಗಳಲ್ಲೂ ಬಾಂಗ್ಲಾ ವಲಸೆಗಾರರಿದ್ದಾರೆ.

ಅವರಿಗೆ ಮತದಾರರ ಗುರುತಿನ ಕಾರ್ಡು, ಆಧಾರ್‌, ಪಡಿತರ ಕಾರ್ಡು ಮಾಡಿಕೊಟ್ಟು ಸಕ್ರಮ ಮಾಡಲಾ ಗುತ್ತಿದೆ ಎಂಬ ಆರೋಪವಿದೆ. ಉತ್ತರ ಭಾರತದಿಂದ ಕಾರ್ಮಿಕರಾಗಿ ಬರುವವರಲ್ಲಿ ಬಾಂಗ್ಲಾದೇಶೀಯರೂ ಇರುತ್ತಾರೆ. ಕೇಳಿದರೆ ತಾವು ಬಿಹಾರದವರು, ಪಶ್ಚಿಮ ಬಂಗಾಳದವರು ಅಥವಾ ಜಾರ್ಖಂಡ್‌ನ‌ವರು ಎಂದು ಹೇಳುತ್ತಾರೆ. ಬೆಂಗಳೂರು ನಗರವೊಂದರಲ್ಲೇ 2 ಲಕ್ಷಕ್ಕೂ ಅಕ್ರಮ ಬಾಂಗ್ಲಾದೇಶೀಯರಿದ್ದಾರೆ ಎನ್ನಲಾಗುತ್ತಿದೆ.

Advertisement

ಇನ್ನು ಬಾಂಗ್ಲಾ ಗಡಿಗೆ ಒತ್ತಿಕೊಂಡಿರುವ ಈಶಾನ್ಯ ರಾಜ್ಯಗಳಲ್ಲಿ ಅವರು ಇಲ್ಲ ಎನ್ನಲು ಸಾಧ್ಯವೇ? ಮುಖ್ಯವಾಗಿ ಈ ಅಕ್ರಮ  ವಲಸೆಕೋರರು ಭಾರತೀಯರ ಅಸಂಘಟಿತ ವಲಯದ ಉದ್ಯೋಗವನ್ನು ಕಸಿದುಕೊಳ್ಳುತ್ತಿದ್ದಾರೆ. ಕೂಲಿ, ಮೇಸ್ತ್ರಿಯಂತಹ ಕೆಲಸಗಳನ್ನು ಇವರು ಕಡಿಮೆ ಸಂಬಳಕ್ಕೆ ಮಾಡುವುದರಿಂದ ಗುತ್ತಿಗೆದಾರರು ಅವರನ್ನೇ ಕರೆತರುತ್ತಿದ್ದಾರೆ. ಇದು ಒಂದು ವಿಚಾರವಾದರೆ ಇನ್ನು ಅಕ್ರಮ ವಲಸಿಗರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂಬ ರಾವತ್‌ ಕಳವಳ ನೈಜ ವಾದದ್ದು. ಪಾಕಿಸ್ಥಾನದ ಐಎಸ್‌ಐ ಮತ್ತು ಕೆಲವು ಭಯೋತ್ಪಾದಕ ಸಂಘಟನೆಗಳು ಅಕ್ರಮ ವಲಸಿಗರ ಮೂಲಕ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದ ಕೆಲವು ಸಂಚುಗಳನ್ನು ಪೊಲೀಸರು ಮತ್ತು ಬೇಹುಪಡೆ ಬಯಲಿಗೆಳೆದದ್ದುಂಟು. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಅಕ್ರಮ ವಲಸಿಗರ ಕುರಿತಾದ ದೂರುಗಳು ಇವೆ. ಹೀಗಿರುವಾಗ ಸೇನೆಯ ಮುಖ್ಯಸ್ಥ ನೀಡಿದ ಹೇಳಿಕೆಗೆ ಮಹತ್ವವಿದೆ ಎಂದು ಅನ್ನಿಸುವುದಿಲ್ಲವೇ? ಈ ಹೇಳಿಕೆ ಯನ್ನು ರಾಜಕೀಯದ ಮಸೂರದಿಂದ ಹೊರಗಿಟ್ಟು ನೋಡಬಹುದಲ್ಲ.

Advertisement

Udayavani is now on Telegram. Click here to join our channel and stay updated with the latest news.

Next