ಹೊಸದಿಲ್ಲಿ : ‘ಪಾಕಿಸ್ಥಾನದಲ್ಲಿ ಸರಕಾರ ಬದಲಾಗಿದೆ; ಹೊಸ ಪ್ರಧಾನಿ (ಇಮ್ರಾನ್ ಖಾನ್) ಬಂದಿದ್ದಾರೆ; ಆದರೂ ಪಾಕಿಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ; ಈಗಲೂ ಪಾಕ್ ಸೇನೆಯೇ ಪರಮೋಚ್ಚವಾಗಿದೆ’ ಎಂದು ಮಾಜಿ ಸೇನಾ ಸಚಿವ ಮತ್ತು ಕೇಂದ್ರ ಸಹಾಯಕ ವಿದೇಶ ವ್ಯವಹಾರಗಳ ಸಚಿವ ವಿಕೆ ಸಿಂಗ್ ಇಂದು ಸೋಮವಾರ ಹೇಳಿದ್ದಾರೆ.
ಪಾಕಿಸ್ಥಾನದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಿರುವ ಹೊರತಾಗಿಯೂ ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ಕಡಿಮೆಯಾಗಿಲ್ಲವಲ್ಲ ? ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವ ವಿಕೆ ಸಿಂಗ್ ಅವರು, “ಪಾಕಿಸ್ಥಾನದಲ್ಲಿ ಏನೂ ಬದಲಾಗಿಲ್ಲ; ಈಗಲೂ ಅಲ್ಲಿ ಸೇನೆಯೇ ಪರಮೋಚ್ಚವಾಗಿದೆ’ ಎಂದು ಹೇಳಿದರು.
‘ಇಮ್ರಾನ್ ಖಾನ್ ಅವರನ್ನು ಪಾಕ್ ಸೇನೆಯೇ ಪ್ರಧಾನಿಯನ್ನಾಗಿ ಮಾಡಿರುವಾಗ ನೀವು ಅಲ್ಲಿ ಯಾವ ರೀತಿಯ ಬದಲಾವಣೆಯನ್ನು ನಿರೀಕ್ಷಿಸುತ್ತೀರಿ; ಪಾಕಿಸ್ಥಾನದಲ್ಲಿ ಸೇನೆಯೇ ಪ್ರಬಲವೂ ಪರಮೋಚ್ಚವೂ ಆಗಿದೆ; ಅಲ್ಲಿನ ಎಲ್ಲ ನಿರ್ಧಾರಗಳನ್ನು ಸೇನೆಯೇ ತೆಗೆದುಕೊಳ್ಳುತ್ತಿದೆ’ ಎಂದು ಸಿಂಗ್ ಹೇಳಿದರು.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಸೇನೆಯ ನಿಯಂತ್ರಣದೊಳಗೇ ಉಳಿಯುವರೇ ಅಥವಾ ಅದನ್ನು ದಾಟಿ ಮುಂದೆ ಹೋಗುವರೇ ಎಂಬುದನ್ನು ನಾವಿನ್ನು ಕಾದುನೋಡಬೇಕು ಎಂದು ಸಿಂಗ್ ಹೇಳಿದರು.
ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗದಾರ್ ವಲಯದಲ್ಲಿ ಉಗ್ರರ ಬೃಹತ್ ಒಳನುಸುಳುವಿಕೆಯನ್ನು ವಿಫಲಗೊಳಿಸಿದ ಭಾರತೀಯ ಸೇನಾ ಪಡೆ ಮೂವರು ಉಗ್ರರನ್ನು ಹೊಡೆದುರುಳಿಸಿದ ಒಂದು ತಿಂಗಳ ಒಳಗಾಗಿ ಸಚಿವ ಸಿಂಗ್ ಅವರಿಂದ ಈ ಹೇಳಿಕೆ ಬಂದಿದೆ.
ಹಾಗಿದ್ದರೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು “ಭಾರತ ಮತ್ತು ಪಾಕಿಸ್ಥಾನ ಜತೆಗೂಡಿ ಕಾಶ್ಮೀರ ಪ್ರಶ್ನೆಯನ್ನು ಮಾತುಕತೆ ಮೂಲಕ ಬಗೆಹರಿಸುವುದಕ್ಕೆ ಮುಂದಾಗಬೇಕು’ ಎಂದು ಹೇಳಿರುವುದು ಗಮನಾರ್ಹವಾಗಿದೆ.