ನವದೆಹಲಿ: ಕ್ರಿಶ್ಚಿಯನ್ ಸಮುದಾಯದ ಪ್ರಾಬಲ್ಯ ಹೊಂದಿರುವ ಅರ್ಮೇನಿಯಾ ಹಾಗೂ ಮುಸ್ಲಿಂ ಬಾಹುಳ್ಯ ಹೊಂದಿರುವ ಅಝರ್ ಬೈಜಾನ್ ದೇಶಗಳ ನಡುವೆ ಯುದ್ಧ ಆರಂಭಗೊಂಡಿರುವುದಾಗಿ ವರದಿ ತಿಳಿಸಿದೆ. ಸುಮಾರು ಎರಡು ದಶಕಗಳಿಂದಲೂ ಎರಡೂ ದೇಶಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು, ನಗೊರ್ನೊ-ಕರಬಾಖ್ ಪ್ರದೇಶಕ್ಕಾಗಿ!
ಪ್ರತ್ಯೇಕತೆಗಾಗಿ ಹಾತೊರೆಯುತ್ತಿರುವ ನಗೊರ್ನೊ-ಕರಬಾಖ್ ಗಾಗಿ ಎರಡು ದೇಶಗಳ ನಡುವೆ ಯುದ್ಧ ನಡೆದಿದ್ದು, ಸುಮಾರು 23 ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ. ನೂರಾರು ಮಂದಿ ಗಾಯಗೊಂಡಿರುವುದಾಗಿ ಅಲ್ ಜಜೀರಾ ವರದಿ ವಿವರಿಸಿದೆ.
ಸೋವಿಯತ್ ಒಕ್ಕೂಟ ಪತನದ ಬಳಿಕ ಅರ್ಮೇನಿಯಾ ಹಾಗೂ ಅಝರ್ ಬೈಜಾನ್ ಸ್ವತಂತ್ರ ದೇಶಗಳಾಗಿದ್ದವು. ಆದರೆ ನಗೊರ್ನೊ-ಕರಬಾಖ್ ಅಂತರಾಷ್ಟ್ರೀಯವಾಗಿ ಅಝರ್ ಬೈಜಾನ್ ನ ಭಾಗ ಎಂದು ಗುರುತಿಸಲಾಗಿತ್ತು. ಆದರೆ ಇಲ್ಲಿ ಅರ್ಮೇನಿಯಾ ಸಮುದಾಯವೇ ಹೆಚ್ಚಿದೆ. ಅಲ್ಲದೇ ಅರ್ಮೇನಿಯಾಕ್ಕೆ ರಷ್ಯಾದ ಬೆಂಬಲವಿದ್ದು, ಅಝರ್ ಬೈಜಾನ್ ಗೆ ಟರ್ಕಿ ಬೆಂಬಲ ನೀಡಿರುವುದೇ ಸಂಘರ್ಷ ಉಲ್ಬಣಗೊಳ್ಳಲು ಕಾರಣವಾಗಿದೆ ಎಂದು ವರದಿ ವಿಶ್ಲೇಷಿಸಿದೆ.
ಇದನ್ನೂ ಓದಿ: ಕೊನೆಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಎರಡು ಆಸೆಗಳು ಈಡೇರಲೇ ಇಲ್ಲ!
ಈ ದೇಶಗಳ ಬಗ್ಗೆ ದಕ್ಷಿಣ ಏಷ್ಯಾ ಯಾವಾಗಲೂ ತನ್ನದೇ ದೃಷ್ಟಿಕೋನ ಹೊಂದಿದೆ. ಭಾರತ ಅರ್ಮೇನಿಯಾ ಹಾಗೂ ಅಝರ್ ಬೈಜಾನ್ ದೇಶಗಳ ನಡುವೆ ಉತ್ತಮ ಬಾಂಧವ್ಯ ಹೊಂದಿದೆ. ಎರಡು ದೇಶಗಳ ನಡುವಿನ ಯುದ್ಧದಿಂದಾಗಿ ಉತ್ತರ ದಕ್ಷಿಣ ಅಂತಾರಾಷ್ಟ್ರೀಯ ಸಾರಿಗೆ ಕಾರಿಡಾರ್ (ಮುಂಬೈ ಟು ಚಾಬಾಹಾರ್ ವಯಾ ಅಝರ್ ಬೈಜಾನ್ ಟು ಮಾಸ್ಕೋ ನ ಭಾರತದ ಮಹತ್ವದ ಸಂಪರ್ಕ ಯೋಜನೆಗೆ ತೊಡಕು ಉಂಟಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
2018ರಲ್ಲಿ ಅಝರ್ ಬೈಜಾನ್ ನಲ್ಲಿನ ಬಾಕುವಿನಲ್ಲಿ ಸಂಭವಿಸಿದ ಅಗ್ನಿ ದುರಂತದ ವೇಳೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಚಿವೆ ಸುಷ್ಮಾ ಸ್ವರಾಜ್ ಅವರು ಭೇಟಿ ನೀಡಿದ್ದರು. ಇಲ್ಲಿನ ದೇವಾಲಯಗಳನ್ನು ಹಿಂದೆ ಹಿಂದೂಗಳು ಮತ್ತು ಝೋರಾಸ್ಟ್ರಿಯನ್ ಸಮುದಾಯ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿತ್ತು. ಬಹುಶಃ ಇವರೆಲ್ಲ ಭಾರತದಿಂದ ಭೇಟಿ ನೀಡುತ್ತಿದ್ದ ವ್ಯಾಪಾರಿಗಳು. ಆದರೆ ಅರ್ಮೇನಿಯಾ ದೇಶದ ವಿಚಾರಕ್ಕೆ ಬಂದರೆ, ಅದು ಹಲವಾರು ಪ್ರಮುಖ ವಿಷಯಗಳಲ್ಲಿ ಭಾರತದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ವರದಿ ಹೇಳಿದೆ.