ಹೊಸದಿಲ್ಲಿ: ಇಲ್ಲಿನ ನಜಫ್ ಗಢ್ ನಲ್ಲಿ ಶುಕ್ರವಾರ ಸಲೂನ್ ನಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸಲೂನ್ ನಲ್ಲಿ ಅಪರಿಚಿತ ವ್ಯಕ್ತಿಗಳು ಏಕಾಏಕಿ ಗುಂಡಿನ ಮಳೆಗರೆದಿದ್ದಾರೆ.
ಮೃತಪಟ್ಟ ಇಬ್ಬರನ್ನು ಸೋನು ಮತ್ತು ಆಶಿಶ್ ಎಂದು ಗುರುತಿಸಲಾಗಿದೆ.
ನಜಾಫ್‌ಗಢ್ ನ ಇಂದ್ರಾ ಪಾರ್ಕ್ ಪ್ರದೇಶದಲ್ಲಿನ ಸಲೂನ್ ನಲ್ಲಿ ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸಲಾಗಿದೆ ಎಂದು ನಜಾಫ್ ಗಢ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಸಲೂನ್ ನೊಳಗಿನ ಸಿಸಿಟಿವಿ ದೃಶ್ಯಾವಳಿಗಳು ಆರೋಪಿಯು ಪಾಯಿಂಟ್-ಬ್ಲಾಂಕ್ ರೇಂಜ್ನಲ್ಲಿ ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸುವುದನ್ನು ತೋರಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೋಹನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕರೆ ತಿಳಿಸಿದೆ. ಬಳಿಕ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಅವರ ಶವಗಳನ್ನು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಳುಹಿಸಲಾಗಿದೆ ಮತ್ತು ಫೋರೆನ್ಸಿಕ್ ತಂಡಗಳು ಸಾಕ್ಷ್ಯಗಳನ್ನು ಸಂಗ್ರಹಿಸಲು ಸಲೂನ್ ಗೆ ತಲುಪಿವೆ.
ಪೊಲೀಸರ ತನಿಖೆ ನಡೆಯುತ್ತಿದೆ.