ನವದೆಹಲಿ/ಬೀಜಿಂಗ್:ಲಡಾಖ್ ಗಡಿ ವಿವಾದದ ಸಂಬಂಧ ಚೀನಾ ಜತೆ ಭಾರತ ಸಂಘರ್ಷ ಮುಂದುವರಿಸಿರುವ ನಡುವೆಯೇ ಇದೀಗ 15 ದಿನಗಳ ತೀವ್ರ ಯುದ್ಧಕ್ಕಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ದಾಸ್ತಾನು ಅವಧಿಯನ್ನು ಹೆಚ್ಚಿಸಲು ರಕ್ಷಣಾ ಪಡೆಗಳಿಗೆ ಅಧಿಕಾರ ನೀಡಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಪೂರ್ವ ಲಡಾಖ್ ಪ್ರದೇಶದಲ್ಲಿ ಚೀನಾ ಜತೆಗೆ ಸಂಘರ್ಷ ಮುಂದುವರಿದಿರುವ ನಡುವೆಯೇ ಅಗತ್ಯವಿರುವ ಶಸ್ತ್ರಾಸ್ತ್ರ ದಾಸ್ತಾನು ಮತ್ತು ತುರ್ತು ಆರ್ಥಿಕ ಅಧಿಕಾರವನ್ನು ನೀಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಸ್ಥಳೀಯ ಮತ್ತು ವಿದೇಶಿ ಉಪಕರಣ ಮತ್ತು ಮದ್ದುಗುಂಡು ಖರೀದಿಗಾಗಿ ರಕ್ಷಣಾ ಪಡೆ 50ಸಾವಿರ ಕೋಟಿಗೂ ಅಧಿಕ ಹಣವನ್ನು ವ್ಯಯಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಎರಡು ದೇಶಗಳೊಂದಿಗೆ ಯುದ್ಧಕ್ಕಾಗಿ 10 ದಿನಗಳ ಮದ್ದುಗುಂಡುಗಳ ದಾಸ್ತಾನು ಸಿದ್ಧತೆಗೆ ಇದ್ದ ಅವಕಾಶವನ್ನು ಇದೀಗ ಮದ್ದುಗುಂಡು, ಶಸ್ತ್ರಾಸ್ತ್ರ ದಾಸ್ತಾನು ಮಾಡುವ ಅವಧಿಯನ್ನು ಕನಿಷ್ಠ 15 ದಿನಕ್ಕೆ ಏರಿಕೆ ಮಾಡಲು ಅಧಿಕಾರ ನೀಡಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ರಾಮ & ಆಂಜನೇಯ ಅವತಾರದಲ್ಲಿ ದರ್ಶನ್-ಸುದೀಪ್ : ಫೋಟೋ ವೈರಲ್
ದಾಸ್ತಾನು ಅವಧಿ ಹೆಚ್ಚಳದಿಂದಾಗಿ ಶತ್ರು ದೇಶದ ಸೈನಿಕನ ಜತೆ ನಿರಂತರವಾಗಿ 15 ದಿನಗಳ ಕಾಲ ಹೋರಾಡಲು ಬೇಕಾದಷ್ಟು ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಶೇಖರಿಸಿ ಇಡಬಹುದಾಗಿದೆ. ದಾಸ್ತಾನು 10 I ಹಂತದಿಂದ ಈಗ 15 I ಹಂತಕ್ಕೆ ಏರಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಹಲವು ವರ್ಷಗಳ ಹಿಂದೆ ಸೇನಾಪಡೆಗೆ 40 ದಿನಗಳ ಶಸ್ತ್ರಾಸ್ತ್ರ, ಮದ್ದುಗುಂಡು ದಾಸ್ತಾನು ಮಾಡಿಕೊಳ್ಳುವ ಅಧಿಕಾರ ಇತ್ತು. ಆದರೆ ಯುದ್ಧ ನೀತಿ ಬದಲಾದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಕೊರತೆಯ ಸಮಸ್ಯೆಯಿಂದಾಗಿ ದಾಸ್ತಾನು ದಿನವನ್ನು 40ರಿಂದ 10ಕ್ಕೆ ಇಳಿಸಲಾಗಿತ್ತು.