ಬೆಂಗಳೂರು: ಅಧಿಕ ಇಳುವರಿ ನೀಡುವ “ಅರ್ಕಾ ಅವಿನಾಶ್’ ಎಂಬ ಹೊಸ ಬದನೆಕಾಯಿ ತಳಿಯನ್ನು ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ (ಐಐಎಚ್‌ಆರ್) ವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿದೆ.
ಮೈಸೂರು ಬದನೆ ತಳಿಯನ್ನು ಹೋಲುವ ಅರ್ಕಾ ಅವಿನಾಶ್ ಬದನೆಗೆ ಎಲೆ ಸೊರಗು ರೋಗ ಹೆಚ್ಚು ಬಾಧಿಸದು. ಹೆಕ್ಟೇರ್‌ಗೆ 35- 40 ಟನ್ ಫಸಲು ಬರಲಿದೆ. ಹಾಗೆಯೇ ರೈತರು ತಾವೇ ಬೀಜವನ್ನು ಅಭಿವೃದ್ಧಿಪಡಿಸಬಹುದಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ತಳಿಯ ಸಂಶೋಧನೆಯಲ್ಲಿ ವಿಜ್ಞಾನಿಗಳ ತಂಡ ನಿರತವಾಗಿತ್ತು. ಕಳೆದ ವರ್ಷ ಕೇಂದ್ರ ಸರ್ಕಾರ ಈ ತಳಿಗೆ ಮಾನ್ಯತೆ ನೀಡಿದೆ ಎಂದು ಐಐಎಚ್‌ಆರ್‌ನ ತರಕಾರಿ ವಿಭಾಗದ ಹಿರಿಯ ವಿಜ್ಞಾನಿ ಡಾ.ಟಿ.ಎಚ್.ಸಿಂಗ್ ಹೇಳುತ್ತಾರೆ.
ಇತರ ಬದನೆಕಾಯಿಗಳ ತಳಿಗೆ ಹೋಲಿಸಿದರೆ ಬೀಜ ಕಡಿಮೆ ಇರಲಿವೆ. ಬಹಳ ರುಚಿಯಿಂದ ಕೂಡಿರಲಿದೆ. ಗಿಡದಲ್ಲಿ ಗೊಂಚಲು ರೂಪದಲ್ಲಿ ಕಾಯಿ ಬಿಡಲಿದೆ. 20-22 ಸೆಂಟಿ ಮೀಟರ್ ಬೆಳೆಯಲಿದ್ದು, ಕಾಯಿ ಗಾತ್ರ 3.5 ರಿಂದ 4 ಸೆಂಟಿಮಿಟರ್ ವರೆಗೂ ಇರಲಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶದ ಮಣ್ಣಿನಲ್ಲಿ ಬೆಳೆಯಲು ಈ ಬೆಳೆ ಹೇಳಿ ಮಾಡಿಸಿದಂತಿದೆ. ಅಧಿಕ ಇಳುವರಿ ಪಡೆಯಬಹುದು.
3 ಋತುವಿನಲ್ಲಿ ಕೂಡ ಈ ಬದನೆಯನ್ನು ಬೆಳೆಯಬಹುದಾಗಿದೆ. ನಾಟಿ ಮಾಡಿದ 40 ದಿನಗಳಲ್ಲಿ ಈ ಬೆಳೆ ಕೊಯ್ಲಿಗೆ ಬರಲಿದೆ. ಸೆಪ್ಟೆಂಬರ್-ಅಕ್ಟೋಬರ್, ನವೆಂಬರ್ -ಡಿಸೆಂಬರ್, ಜನವರಿ-ಫೆಬ್ರವರಿಯಲ್ಲಿ ಈ ಬದನೆ ತಳಿ ನಾಟಿ ಮಾಡಬಹುದಾಗಿದೆ. ಒಂದು ಗಿಡದಲ್ಲಿ 4-5 ಕೆ.ಜಿಯಷ್ಟು ಬದನೆ ಕಾಯಿ ಬಿಡಲಿವೆ.
ಹಿಮ ಅಧಿಕ ಪ್ರಮಾಣದಲ್ಲಿ ಬೆಳೆಯ ಮೇಲೆ ಬಿದ್ದರೆ ಇಳುವರಿ ಕುಂಠಿತವಾಗಲಿದೆ. ರಾಜ್ಯದಲ್ಲಿ ರೈತರಿಗೆ ಅರ್ಕಾ ಅವಿನಾಶ್ ತಳಿಯ ಬೀಜಗಳನ್ನು ಮಾರಾಟ ಮಾಡುವ ಕೆಲಸ ನಡೆದಿದೆ. ಅಧಿಕ ಬೀಜ ಇಲ್ಲದೆ ಇರುವುದರಿಂದ ವಾಂಗಿಬಾತ್ ಆಹಾರ ಪದಾರ್ಥ ತಯಾರಿಕೆಗೆ ಹೆಚ್ಚು ಬಳಕೆ ಮಾಡಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸುತ್ತಾರೆ.
ಕೆಲವು ವರ್ಷಗಳಿಂದ ಅರ್ಕಾ ಅವಿನಾಶ್ ತಳಿಯ ಬಗ್ಗೆ ವಿಜ್ಞಾನಿಗಳ ತಂಡ ಸಂಶೋಧನೆಯಲ್ಲಿ ತೊಡಗಿತ್ತು. ಅದರಲ್ಲಿ ಈಗ ಯಶಸ್ವಿಯಾಗಿದೆ. ಅಧಿಕ ಇಳುವರಿ ನೀಡುವ ಈ ತಳಿಯ ಬಗ್ಗೆ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಛತ್ತೀಸ್‌ಗಡ, ತಮಿಳುನಾಡು ಮತ್ತು ಕೇರಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಪಡೆದಿದ್ದಾರೆ.
-ಟಿ.ಎಚ್.ಸಿಂಗ್, ಪ್ರಧಾನ ವಿಜ್ಞಾನಿ ಐಐಎಚ್‌ಆರ್ ಹೆಸರುಘಟ್ಟ
-ದೇವೇಶ ಸೂರಗುಪ್ಪ