Advertisement
ಚೇತೇಶ್ವರ್ ಪೂಜಾರ 128 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದು ಪ್ರಸಕ್ತ ಸರಣಿಯಲ್ಲಿ ಪೂಜಾರ ಹೊಡೆದ ಸತತ 2ನೇ ಶತಕವಾದರೆ, ಲಂಕಾ ನೆಲದಲ್ಲಿ ಬಾರಿಸಿದ ಹ್ಯಾಟ್ರಿಕ್ ಸೆಂಚುರಿ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರು 153 ರನ್ ಪೇರಿಸಿದ್ದರು. ಇದಕ್ಕೂ ಮುನ್ನ 2015ರ ಪ್ರವಾಸದ ವೇಳೆ ಕೊಲಂಬೋದಲ್ಲೆ ಆಡಲಾದ ಕೊನೆಯ ಟೆಸ್ಟ್‌ನಲ್ಲಿ ಅಜೇಯ 145 ರನ್ ಹೊಡೆದು ಮಿಂಚಿದ್ದರು. ಒಟ್ಟಾರೆಯಾಗಿ ಇದು ಪೂಜಾರ ಅವರ 13ನೇ ಶತಕ. ಈ ಮೆರೆದಾಟದ ವೇಳೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರೈಸಿದರು.
Related Articles
ಆರಂಭಕಾರ ಕೆ.ಎಲ್. ರಾಹುಲ್ ಭಾರತದ ಸರದಿಯ ಮತ್ತೂಬ್ಬ ಪ್ರಮುಖ ಸ್ಕೋರರ್. ಸಂಪೂರ್ಣ ಚೇತರಿಸಿಕೊಂಡು ಆಡಲಿಳಿದ ರಾಹುಲ್ 57 ರನ್ ಹೊಡೆದು ರನೌಟಾದರು. ಇದು ರಾಹುಲ್ ಅವರ ಸತತ 6ನೇ ಅರ್ಧ ಶತಕ ಎಂಬುದೊಂದು ಸಾಧನೆ. 82 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಒಳಗೊಂಡಿತ್ತು. ರಾಹುಲ್-ಶಿಖರ್ ಧವನ್ ಮೊದಲ ವಿಕೆಟಿಗೆ 10.1 ಓವರ್‌ಗಳಲ್ಲಿ 56 ರನ್ ಪೇರಿಸಿದರು. ಧವನ್ ಗಳಿಕೆ 35 ರನ್ (37 ಎಸೆತ, 5 ಬೌಂಡರಿ, 1 ಸಿಕ್ಸರ್). ನಾಯಕ ವಿರಾಟ್ ಕೊಹ್ಲಿ ಕೇವಲ 13 ರನ್ ಮಾಡಿ ನಿರ್ಗಮಿಸಿದರು. 133ಕ್ಕೆ 3ನೇ ವಿಕೆಟ್ ಬಿದ್ದಾಗ ಲಂಕೆಗೆ ಮೇಲುಗೈ ಸಾಧಿಸುವ ಅವಕಾಶವೊಂದು ಎದುರಾಗಿತ್ತು. ಆದರೆ ಪೂಜಾರ-ರಹಾನೆ ಇದಕ್ಕೆ ದೊಡ್ಡ ತಡೆಯಾಗಿ ನಿಂತಿದ್ದಾರೆ.
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಗಾಲೆಯ ಆಟವನ್ನೇ ಪುನರಾವರ್ತಿಸಿದ್ದು, ಮತ್ತೂಮ್ಮೆ ಬೃಹತ್ ಮೊತ್ತ ಪೇರಿಸಿದರೆ ಲಂಕೆಗೆ ಸರಣಿ ಸೋಲಿನ ಕಂಟಕ ಎದುರಾಗುವುದರಲ್ಲಿ ಅನುಮಾನವಿಲ್ಲ.