Advertisement

ರಾಜ್ಯೋತ್ಸವಕ್ಕೆ ಕವಿವಿಯಿಂದ ಅರಿವೇ ಗುರು ಪ್ರಶಸ್ತಿ

04:06 PM Oct 29, 2022 | Team Udayavani |

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಯುಕ್ತ ಮೂವರು ಸಾಧಕರಿಗೆ ಅರಿವೇ ಗುರು ಎಂಬ ರಾಜ್ಯಮಟ್ಟದ ಪ್ರಶಸ್ತಿ ನೀಡಲು ಮುಂದಾಗಿದೆ.

Advertisement

ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವ ವಿವಿಯು, ಸಾಹಿತ್ಯ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ನಿರುಪಾಧೀಶ ಸ್ವಾಮೀಜಿ, ವಿಜ್ಞಾನ ಕ್ಷೇತ್ರದಲ್ಲಿ ಖ್ಯಾತ ರಸಾಯನಶಾಸ್ತ್ರಜ್ಞ ಡಾ|ಗೌತಮ ದೇಸಿರಾಜು ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ಮನೋಶಾಸ್ತ್ರಜ್ಞ ಡಾ|ಸಿ.ಆರ್.ಚಂದ್ರಶೇಖರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಈ ಪ್ರಶಸ್ತಿಯು ತಲಾ ರೂ. 25 ಸಾವಿರ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ.

ಇಲ್ಲಿಯ ಕವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಕೈಗೊಂಡು ಈ ಬಗ್ಗೆ ಮಾಹಿತಿ ನೀಡಿದ ಕುಲಪತಿ ಪ್ರೊ|ಕೆ.ಬಿ.ಗುಡಸಿ ಮಾತನಾಡಿ, ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆ ಆದಾಗಿನಿಂದಲೂ ಕನ್ನಡ ಅಧ್ಯಯನ ಪೀಠದ ಮೂಲಕ ಕನ್ನಡ ರಾಜ್ಯೋತ್ಸವವನ್ನು ಕವಿವಿ ಅತ್ಯಂತ ವಿಶಿಷ್ಟವಾಗಿ ಆಚರಿಸುತ್ತಿದೆ. ಪ್ರಸಕ್ತ ಸಾಲಿನಿಂದ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರ ತಜ್ಞರ ಜಂಟಿ ಶೋಧನಾ ಸಮಿತಿ ರಚಿಸಿ ಸಾಧಕರನ್ನು ಗುರುತಿಸಿದೆ. ವಿಶ್ವವಿದ್ಯಾಲಯದ ಈ ನಡೆ ಸಾಹಿತ್ಯ ಸ್ನೇಹಿಯಾಗಿದ್ದು, ಕವಿವಿ ಲಾಂಚನದಲ್ಲಿರುವ ಘೋಷ ವಾಕ್ಯ  ಅರಿವೇ ಗುರು ಹೆಸರಿನಡಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದರು.

ಈ ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಡಾ|ಚಂದ್ರಶೇಖರ ಕಂಬಾರ ಅವರು, ಕವಿವಿಯ ಸುವರ್ಣಮಹೋತ್ಸವ ಸಭಾಂಗಣದಲ್ಲಿ ನ.1 ರಂದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಸವಿನೆನಪಿಗಾಗಿ ಡಾ|ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಡಾ|ಚಂದ್ರಶೇಖರ ಕಂಬಾರ ಅವರ ಹೆಸರಿನಲ್ಲಿ ನೂತನ ಸಭಾಭವನ ನಿರ್ಮಿಸಲಾಗಿದ್ದು, ಅದನ್ನು ಸಹ ರಾಜ್ಯೋತ್ಸವದಂದು ಉದ್ಘಾಟಿಸಲಾಗುವುದು ಎಂದರು.

Advertisement

ಇದನ್ನೂ ಓದಿ:ಛತ್ ಪೂಜೆ ವೇಳೆ ಬೆಂಕಿ ಅವಘಡ : 25ಕ್ಕೂ ಹೆಚ್ಚು ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೆಸರಾಂತ ಸಾಹಿತಿಗಳನ್ನು, ಸಾಹಿತ್ಯದ ಅಮೂಲ್ಯ ಕಾಣಿಕೆಗಳನ್ನು ನೀಡಿರುವ ಕವಿವಿಯ ಕನ್ನಡ ಅಧ್ಯಯನ ಪೀಠವು ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡ ಭಾರತಿ ಸಂಶೋಧನಾ ನಿಯತಕಾಲಿಕೆಯನ್ನು ಬಿಡುಗಡೆ ಮಾಡಲಿದೆ. ಸಂಶೋಧಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರ ಸಂಶೋಧನಾ ಕ್ಷೇತ್ರಕ್ಕೆ ಇದು ಹೆಚ್ಚು ಸಹಾಯವಾಗಲಿದೆ ಎಂದರು.

ಧಾರವಾಡ ಜಿಲ್ಲಾಡಳಿತ ಮತ್ತು ಕೃಷಿ, ತೋಟಗಾರಿಕೆ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಉದ್ಯಾನ ವಿಭಾಗವು ಪ್ರಥಮ, ದ್ವಿತೀಯ ಸೇರಿದಂತೆ ಒಟ್ಟು ಹತ್ತು ಪ್ರಶಸ್ತಿಗಳೊಂದಿಗೆ ಚಾಂಪಿಯನ್ ಪಟ್ಟಗಳಿಸಿದೆ. ಇದು ನಮ್ಮ ಉದ್ಯಾನ ವಿಭಾಗ ಮತ್ತು ಕವಿವಿ ಕ್ಯಾಂಪ್ಸ್ ಹಸಿರೀಕರಣಕ್ಜೆ ಮತ್ತಷ್ಟು ಪ್ರೇರಣೆ ನೀಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಯಶಪಾಲ ಕ್ಷೀರಸಾಗರ, ಮಾಲ್ಯಮಾಪನ ಕುಲಸಚಿವ ಡಾ|ಸಿ.ಕೃಷ್ಣಮೂರ್ತಿ, ಡಾ|ಜೆ.ಎಂ.ಚಂದುನವರ, ಡಾ|ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ|ಎನ್.ವೈ.ಮಟ್ಟಹಾಳ, ಪ್ರಸಾರಂಗದ ನಿರ್ದೇಶಕ ಡಾ|ಚಂದ್ರಶೇಖರ ರೊಟ್ಟಿಗವಾಡ, ಕವಿವಿ ಉದ್ಯಾನಾಧಿಕಾರಿ ಡಾ|ಜಿ.ಎಸ್.ಮುಳಗುಂದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next