ಪಶ್ಚಿಮ ಬಂಗಾಳ: ʼಕೇಸರಿʼ ಬಣ್ಣದ ವಿಚಾರದಲ್ಲಿ ʼಪಠಾಣ್ʼ ಸಿನಿಮಾದ ʼಬೇಷರಂ ರಂಗ್ʼ ಹಾಡಿನ ಕುರಿತು ಎದ್ದಿರುವ ವಿವಾದದ ನಡುವೆಯೇ ಗಾಯಕ ಅರ್ಜಿತ್ ಸಿಂಗ್ ಅವರ ಸುತ್ತವೂ ಕೇಸರಿ ಬಣ್ಣದ ವಿವಾದ ಹುಟ್ಟಿದೆ.
ಬಾಲಿವುಡ್ ನ ಖ್ಯಾತ ಗಾಯಕ ಅರ್ಜಿತ್ ಸಿಂಗ್ ಅವರ ಸಂಗೀತ ಕಾರ್ಯಕ್ರಮವೊಂದಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿದ್ದು ರಾಜಕೀಯ ವಲಯದಲ್ಲಿʼಕೇಸರಿ ವಿವಾದʼ ಹುಟ್ಟಿಸಿದೆ.
ಇತ್ತೀಚೆಗೆ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅರ್ಜಿತ್ ಸಿಂಗ್ ʼದಿಲ್ ವಾಲೆʼ ಚಿತ್ರದ ‘ರಂಗ್ ದೇ ತು ಮೋಹೆ ಗೆರುವಾ’ ಹಾಡಿನ ಎರಡು ಸಾಲನ್ನು ಹಾಡಿದ್ದು. ಈ ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ , ಶಾರುಖ್ ಖಾನ್, ಸಿಎಂ ಮಮತಾ ಬ್ಯಾನರ್ಜಿ ಭಾಗಿಯಾಗಿದ್ದರು.
‘ರಂಗ್ ದೇ ತು ಮೋಹೆ ಗೆರುವಾ’ ಎಂದರೆ ʼನನ್ನ ಮೇಲೆ ಕೇಸರಿ ಬಣ್ಣ ಹಾಕಿʼ ಎಂದರ್ಥ ಬರುತ್ತದೆ. ಈ ಕಾರಣದಿಂದ ಇದು ಮಮತಾ ಅವರಿಗೆ ಸಿಟ್ಟು ಬರಿಸಿದೆ. ಇದೇ ನೆಪವನ್ನಿಟ್ಟುಕೊಂಡು ಸರ್ಕಾರ ಅರ್ಜಿತ್ ಸಿಂಗ್ ಅವರ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಸಚಿವ ಫಿರ್ಹಾದ್ ಹಕೀಮ್ ಈ ಬಗ್ಗೆ ಮಾತನಾಡಿ, ಗಾಯಕ ಅರ್ಜಿತ್ ಸಿಂಗ್ ಅವರ ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ಜಿ-20 ಕಾರ್ಯಕ್ರಮ ನಡೆಯಲಿದೆ. ಅರ್ಜಿತ್ ಸಿಂಗ್ ಅವರ ಸಂಗೀತಕ್ಕೆ ಹೆಚ್ಚು ಜನರು ಬರಲಿದ್ದು, ಇತ್ತ ಜಿ-20 ಹತ್ತಾರು ದೇಶದ ಪ್ರಮುಖರು ಭಾಗಿಯಾಗಲಿದ್ದು, ಇದರಿಂದಾಗಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಕಷ್ಟವಾಗಿರುವುದರಿಂದ ಅನುಮತಿ ನಿರಾಕರಿಸಲಾಗಿದೆ ಎಂದಿದ್ದಾರೆ.
ಕೆಲವೊಂದು ವರದಿಯ ಪ್ರಕಾರ ಅರ್ಜಿತ್ ಸಿಂಗ್ ಕಾರ್ಯಕ್ರಮವನ್ನು ಮತ್ತೊಂದು ದಿನಕ್ಕೆ ಮುಂದೂಡಲಾಗಿದೆ ಎಂದು ವರದಿ ಮಾಡಿವೆ. ಇದರೊಂದಿಗೆ ಸಲ್ಮಾನ್ ಖಾನ್ ಅವರ ಕಾರ್ಯಕ್ರಮಕ್ಕೂ ಅನುಮತಿ ನಿರಾಕರಿಸಿವೆ ಎಂದು ವರದಿ ತಿಳಿಸಿವೆ.