Advertisement

ಬಿಸಿಲಿನ ಧಗೆಗೆ ಬತ್ತಿದ ನೀರಿನ ಮೂಲ

12:23 PM Mar 02, 2018 | Team Udayavani |

ಸುಳ್ಯ : ತಾಲೂಕಿನ ಪ್ರಮುಖ ನೀರಿನ ಮೂಲಗಳಾದ ಪಯಸ್ವಿನಿ ಮತ್ತು ಕುಮಾರಧಾರಾದಲ್ಲಿ ನೀರಿನ ಪ್ರಮಾಣ ತೀವ್ರ ಇಳಿಮುಖ ಕಂಡಿದೆ. ಬಾವಿ, ಕೆರೆ, ಕೊಳವೆಬಾವಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಕೆಲ ಗ್ರಾಮಗಳಲ್ಲಿ ಕುಡಿಯಲು, ಕೃಷಿಗೆ ನೀರಿನ ಅಭಾವ ಎದುರಾಗಿದೆ. ಹತ್ತು ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ಬಾರಿ ನೀರಿನ ಅಭಾವ ತೀವ್ರವಾಗಿ ಕಾಡುವ ಸಾಧ್ಯತೆ ಕಂಡು ಬಂದಿದೆ.

Advertisement

ತಾಲೂಕಿನಲ್ಲಿ ವಾಣಿಜ್ಯ ಬೆಳೆಯಾಗಿ ಅಡಿಕೆ ಇದೆ. ಸುಮಾರು 11,285 ಎಕರೆಗಳಿಗಿಂತ ಅಧಿಕ ಅಡಿಕೆ ತೋಟ ಇದೆ. ಪಯಸ್ವಿನಿ, ಕುಮಾರಧಾರಾ ಹಾಗೂ ಸಣ್ಣ-ಪುಟ್ಟ ತೋಡುಗಳು, ಕೊಳವೆಬಾವಿ, ಕೆರೆ ನೀರಿನ ಮೂಲಗಳು. ಈ ಬಾರಿ ಉಷ್ಣಾಂಶ ಪ್ರಮಾಣ 35ರಿಂದ 38ರ ತನಕ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದ್ದು, ನದಿ, ತೋಟು, ಕೆರೆ ಬತ್ತಿದೆ. ಕೊಳವೆಬಾವಿಯಲ್ಲೂ ಅಂತರ್ಜಲ ಕುಸಿದಿದೆ.

ದೇವರ ಮೀನಿಗೆ ರಕ್ಷಣೆ
ಪ್ರಸಿದ್ಧ ಯಾತ್ರಾಸ್ಥಳ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ತೊಡಿಕಾನ ಮತ್ಸ್ಯತೀರ್ಥದಲ್ಲಿ ಸಾವಿರಾರು ದೇವರು ಮೀನುಗಳಿವೆ. ಬಿಸಿಲಿಗೆ ಅಲ್ಲಿನ ನೀರಿನ ಮಟ್ಟದಲ್ಲಿ ಇಳಿದಿದೆ. ಮತ್ಸ್ಯ ಹೊಳೆಯ ಮೇಲ್ಭಾಗದ ಗುಡ್ಡದಿಂದ ಬರುವ ನೀರನ್ನು ಟ್ಯಾಂಕಿ ಯಲ್ಲಿ ಸಂಗ್ರಹಿಸಿ, ಮತ್ಸ್ಯತೀರ್ಥಕ್ಕೆ ಬಿಡಲಾಗುತ್ತಿದೆ. ಎರಡು ಅಣೆಕಟ್ಟಿನ ಮೂಲಕ ನೀರು ಸಂಗ್ರಹಿಸಲಾಗಿದೆ. ಪೈಪ್‌ ಹಾಸಿ, ನೀರು ಚಿಮ್ಮಿಸಲಾಗುತ್ತಿದೆ. ದೇವರ ಗುಂಡ ಜಲಪಾತ ಮತ್ತು ಅದರ ಪೂರ್ವ ಭಾಗದಿಂದ ಬರುವ ನೀರನ್ನು ಎರಡು ಟ್ಯಾಂಕಿಯಲ್ಲಿ ಸಂಗ್ರಹಿಸಿ, ಬಳಕೆ ಮಾಡಲಾಗುತ್ತಿದೆ.

ಬೋರ್‌ ಯಂತ್ರಕ್ಕೆ ಬಿಡುವಿಲ್ಲ
ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯುವ ಕಾರ್ಯ ಬಿಡುವಿಲ್ಲದೆ ಸಾಗಿದೆ. ಅನೇಕ ಕಡೆಗಳಲ್ಲಿ ನೀರಿಲ್ಲದೆ, ಕೊಳವೆಬಾವಿ ಕೈ ಕೊಟ್ಟಿವೆ. ಆದರೂ ಕೊರೆಯುವ ಕಾರ್ಯ ನಿಂತಿಲ್ಲ. ಕೆಲವೆಡೆ ಕಳೆದ ವರ್ಷ ಕೊರೆದ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಕುಸಿತ ಕಂಡಿದೆ.

ಬಾವಿ ಬತ್ತಿದೆ
ಈ ಹಿಂದೆ ಮಳೆಗಾಲದ ತನಕವೂ ಬಾವಿಯಲ್ಲಿ ನೀರು ಇರುತಿತ್ತು. ಕೆಲ ವರ್ಷಗಳಿಂದ ಅದು ಕುಸಿದತ್ತ ಸಾಗಿದೆ. ಈ ವರ್ಷ ಫೆಬ್ರವರಿ ಅರ್ಧದಲ್ಲೇ ಬತ್ತಿ ಹೋಗಿದೆ. ನದಿಯಲ್ಲಿ ಹೊರತುಪಡಿಸಿ, ಹೊಳೆ, ತೋಡಿನಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಆವಿಯಾಗಿದೆ.
– ತಾರಾಪ್ರಸಾದ್‌, ಪೆರ್ಲಂಪಾಡಿ

Advertisement

ಇನ್ನೆರಡು ತಿಂಗಳು ಇದೆ ಬೇಸಗೆ
ಬಿಸಿಲಿನ ಪ್ರಖರತೆ ತೀವ್ರವಾಗಿದೆ. ಇದರ ಪರಿಣಾಮ ನದಿ, ಹೊಳೆ, ಬಾವಿ, ಕೆರೆಗಳಲ್ಲಿ ನೀರು ಆವಿಯಾಗಿದೆ. ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟವೂ ಕುಸಿತ ಕಂಡಿರುವುದು ಅಂಕಿ-ಅಂಶದಲ್ಲಿ ದಾಖಲಾಗಿದೆ. ಬಿರು ಬೇಸಗೆ ಕಾಲ ಇನ್ನೆರಡು ತಿಂಗಳು ಇದ್ದು, ನೀರಿಗೆ ಬರ ಬರುವ ಸಾಧ್ಯತೆ ಕಂಡು ಬರುತ್ತಿದೆ.
– ರಂಜಿತ್‌, ಸುಳ್ಯ, ಕೃಷಿಕ

 ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next