ಹೊಸದಿಲ್ಲಿ: ಇತ್ತೀಚೆಗೆ ತಾಜ್ ಮಹಲ್ ಗೆ ಭೇಟಿ ನೀಡಿದ ಅರ್ಜೆಂಟೀನಾದ ಪ್ರವಾಸಿಗರೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಆದರೆ ಸದ್ಯ ಆತನ ಅಧಿಕಾರಿಗಳ ಕೈಗೆ ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ.
ಅರ್ಜೆಂಟೀನಾ ಪ್ರವಾಸಿಯು ಡಿಸೆಂಬರ್ 26 ರಂದು ತಾಜ್ ಮಹಲ್ ಗೆ ಭೇಟಿ ನೀಡಿದ್ದರು. ಈ ವೇಳೆ ರ್ಯಾಂಡಮ್ ಪರೀಕ್ಷೆಗೆ ಒಳಗಾಗಿದ್ದರು.
ಪರೀಕ್ಷೆ ಫಲಿತಾಂಶದ ಬಗ್ಗೆ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು. ನಂತರ ಅವರು ನಾಪತ್ತೆಯಾಗಿದ್ದಾರೆ ಎಂದು ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸಿಯು ಅಧಿಕಾರಿಗಳಿಗೆ ತಪ್ಪಾದ ಫೋನ್ ನಂಬರ್ ಮತ್ತು ತಪ್ಪಾದ ಹೋಟೆಲ್ ವಿಳಾಸವನ್ನು ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳಿಗೆ ಅವನನ್ನು ಪತ್ತೆಹಚ್ಚಲು ಕಷ್ಟವಾಗಿದೆ. ನಾಪತ್ತೆಯಾದ ವ್ಯಕ್ತಿಯ ವಿವರಗಳನ್ನು ಪಡೆಯಲು ಆರೋಗ್ಯ ಇಲಾಖೆ ಇದೀಗ ಸ್ಥಳೀಯ ಗುಪ್ತಚರ ಘಟಕ, ವಿಮಾನ ನಿಲ್ದಾಣ ಪ್ರಾಧಿಕಾರ, ಎಎಸ್‌ಐ ಮತ್ತು ಹತ್ತಿರದ ಹೋಟೆಲ್ ಗಳಿಗೆ ಮಾಹಿತಿ ನೀಡಿದೆ.
“ನಾವು ಕೋವಿಡ್-19 ಪಾಸಿಟಿವ್ ಆದ ಅರ್ಜೆಂಟೀನಾದ ಪ್ರವಾಸಿಗನನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಅವರು ಒದಗಿಸಿದ ಸಂಪರ್ಕ ವಿವರಗಳು ತಪ್ಪಾಗಿದೆ. ಇತ್ತೀಚೆಗೆ ಚೆಕ್-ಇನ್ ಮಾಡಿದ ಅರ್ಜೆಂಟೀನಾದ ಪ್ರವಾಸಿಗರ ವಿವರಗಳನ್ನು ಒದಗಿಸಲು ಹೋಟೆಲ್‌ಗಳಿಗೆ ಕೇಳಲಾಗಿದೆ. ನಾವು ಸಹ ಸಂಪರ್ಕಿಸಿದ್ದೇವೆ. ವ್ಯಕ್ತಿಯ ವಿವರಗಳನ್ನು ಪಡೆಯಲು ಎಎಸ್‌ಐ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಸಂಪರ್ಕಿಸಿದ್ದೇವೆ. ಒಮ್ಮೆ ಪತ್ತೆಯಾದ ನಂತರ ರೋಗವು ಮತ್ತಷ್ಟು ಹರಡುವುದನ್ನು ತಡೆಯಲು ಅವನನ್ನು ಪ್ರತ್ಯೇಕಿಸಲಾಗುತ್ತದೆ” ಎಂದು ಆಗ್ರಾ ಮುಖ್ಯ ಆರೋಗ್ಯಾಧಿಕಾರಿ ಅರುಣ್ ಕುಮಾರ್ ಹೇಳಿದ್ದಾರೆ.