ಸಾವೊ ಪೌಲೊ (ಬ್ರೆಜಿಲ್): ಫುಟ್‌ಬಾಲ್ ಪಂದ್ಯದ ನಡುವೆ ಅಹಿತಕರ ಘಟನೆಗಳು ನಡೆಯುವುದು ಸಾಮಾನ್ಯ. ಇಲ್ಲೊಂದು ವಿಭಿನ್ನ ಘಟನೆ ನಡೆದಿದೆ.
ಲಿಯೋನೆಲ್ ಮೆಸ್ಸಿ-ನೇಮರ್ ಅವರ ತಂಡಗಳಾದ ಆರ್ಜೆಂಟೀನಾ-ಬ್ರೆಜಿಲ್ ನಡುವಣ ವಿಶ್ವಕಪ್ ಅರ್ಹತಾ ಸುತ್ತಿನ ಹೈ ವೋಲ್ಟೇಜ್ ಪಂದ್ಯದ 7ನೇ ನಿಮಿಷದಲ್ಲಿ ಮೈದಾನಕ್ಕಿಳಿದ ಆರೋಗ್ಯಾಧಿಕಾರಿಗಳು ನಾಲ್ವರು ಆಟಗಾರರನ್ನು ವಶಕ್ಕೆ ಪಡೆದಿದ್ದಾರೆ.
ಕೊರೊನಾ ನಿಯಮವನ್ನು ಉಲ್ಲಂಘಿಸಿದ ಕಾರಣ ಈ ಆಟಗಾರರನ್ನು ವಶಕ್ಕೆ ಪಡೆಯಲಾಗಿದೆ. ಇವರನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಪಂದ್ಯವನ್ನು ರದ್ದು ಮಾಡಲಾಯಿತು.
ಇಂಗ್ಲೆಂಡ್‌ನಲ್ಲಿ ಪ್ರೀಮಿಯರ್ ಲೀಗ್ ಮುಗಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕಾಗಿ ಆರ್ಜೆಂಟೀನಾದ ನಾಲ್ವರು ಆಟಗಾರರಾದ ಮಾರ್ಟಿನೆಜ್, ಗಿವೊನಿ, ರೊಮೆರೊ ಮತ್ತು ಬುಯೆಂಡಿಯಾ ಬ್ರೆಜಿಲ್‌ಗೆ ಆಗಮಿಸಿದ್ದರು. ಸ್ಥಳೀಯ ನಿಯಮದ ಪ್ರಕಾರ ಹೊರ ದೇಶದಿಂದ ಬಂದವರು 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು.
ಈ ಬಗ್ಗೆ ಆರೋಗ್ಯ ಇಲಾಖೆಯು ಆರ್ಜೆಂಟೀನಾ ಆಟಗಾರರಿಗೆ ಮಾಹಿತಿ ನೀಡಿತ್ತು. ಆದರೂ ಈ ನಾಲ್ವರು ಆಟಗಾರರು ನಿಯಮ ಉಲ್ಲಂಘಿಸಿ ಪಂದ್ಯವನ್ನಾಡಲು ಮೈದಾನಕ್ಕಿಳಿದಿದ್ದರು. ಇವರನ್ನು ಆರೋಗ್ಯಾಧಿಕಾರಿಗಳು ಬಂಧಿಸಿ ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ.