ಹುಬ್ಬಳ್ಳಿ: ಬೆಳ್ಳಿ ಆಭರಣಗಳ ಅಂಗಡಿಯ ಶಟರ್ಸ್ ಕೀಲಿ ಮುರಿದು ಕಳ್ಳತನ ಮಾಡಿದ್ದ ರಾಜಸ್ಥಾನ ಮೂಲದ ಅಂತಾರಾಜ್ಯ ಕಳ್ಳರಿಬ್ಬರನ್ನು ಶಹರ ಠಾಣೆ ಪೊಲೀಸರು ಕಳುವಿನ ಸಾಮಗ್ರಿ, ನಗದು ಹಾಗೂ ಕಾರು ಸಮೇತ ಶುಕ್ರವಾರ ಬಂಧಿಸಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ಕಳ್ಳತನ ಪ್ರಕರಣದಲ್ಲಿ ಮೂಲತಃ ರಾಜಸ್ಥಾನದ ಪಾಟವಾ ಗ್ರಾಮದ ಬೆಂಗಳೂರು ಪಟೇಗಾರ ಪಾಳ್ಯ ಮುಖ್ಯರಸ್ತೆಯ ಭುಂದಾರಾಮ ಊರ್ಫ್ ಬಾಬು ಕೆ. ಡಯ್ನಾ ಹಾಗೂ ರಾಜಸ್ಥಾನದ ದೊಂದಲಾ ಸೋಜಿತ ರಸ್ತೆಯ ಬೆಂಗಳೂರು ಶ್ರೀರಾಮಪುರಂದ ಮುಖೇಶ ಎಂ. ಸಾರನ ಬಂಧಿತರಾಗಿದ್ದಾರೆ. ರಾಜಸ್ಥಾನ ಮೂಲದ ಬೆಂಗಳೂರು ಗೊಲ್ಲರ ಹಟ್ಟಿಯ ದೇವಾರಾಮ ಪುಕಾರಾಮ ಹಾಗೂ ಬೆಂಗಳೂರು ಶ್ರೀರಾಮಪುರಂನ ಪೇಮಾರಾಮ ತಿಲೋಕರಾಮ ಪರಾರಿಯಾಗಿದ್ದಾರೆ.
ಬಂಧಿತರು ಏ. 28ರಂದು ಬೆಳಗಿನ ಜಾವ ದುರ್ಗದ ಬಯಲು ಕಿಲ್ಲಾದ ಮಹಾಜನ ಕಾಂಪ್ಲೆಕ್ಸ್‌ನಲ್ಲಿರುವ ಸನ್‌ರೈಸ್ ಸಿಲ್ವರ್ ಅಂಗಡಿಯ ಶಟರ್ಸ್ ಮುರಿದು 3.5 ಲಕ್ಷ ನಗದು ಹಾಗೂ ಒಂದೂವರೆ ಕೆಜಿ ತೂಕದ ಹಳೆಯ ಬೆಳ್ಳಿ ಸಾಮಗ್ರಿ, 39 ಕೆಜಿ ತೂಕದ ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿದ್ದರು. ಈ ಕುರಿತು ಅಂಗಡಿಯ ಮಾಲೀಕ ನಾರಾಯಣ ವಿ. ಇರಕಲ್ಲ ಶಹರ ಠಾಣೆಯಲ್ಲಿ ದೂರು ಕೊಟ್ಟಿದ್ದರು.
ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಾರಿನಲ್ಲಿ ಬಂದಿದ್ದ ಮೂವರು ಅಂಗಡಿಯ ಶಟರ್ಸ್ ಮುರಿದು ಕಳ್ಳತನ ಮಾಡಿರುವುದು ಚಿತ್ರೀಕರಣಗೊಂಡಿತ್ತು. ಇದನ್ನು ಆಧರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಹರ ಠಾಣೆ ಇನ್ಸ್‌ಪೆಕ್ಟರ್ ಡಾ| ಗಿರೀಶ ಬೋಜನ್ನವರ ಮತ್ತು ತಂಡದವರು ಕಳ್ಳರ ಪತ್ತೆ ನಡೆಸಿದ್ದರು.
ಸೆರೆ ಸಿಕ್ಕಿದ್ದು ಹೇಗೆ?: ಶುಕ್ರವಾರ ಬೆಳಗಿನ ಜಾವ ಗಬ್ಬೂರ ಬೈಪಾಸ್ ಕ್ರಾಸ್ ಟೋಲ್ ನಾಕಾ ಹತ್ತಿರ ಡಬ್ಬಿ ಚಹಾ ಅಂಗಡಿ ಎದುರು ಸಂಶಯಾಸ್ಪದವಾಗಿ ನಿಂತಿದ್ದ ಕಾರನ್ನು ಪೊಲೀಸರು ಪರಿಶೀಲಿಸಲು ಹೋದಾಗ ಅದರಲ್ಲಿದ್ದವರು ಪರಾರಿಯಾಗಲು ಯತ್ನಿಸಿದರು. ಅವರನ್ನು ಹಿಡಿದು ವಿಚಾರಣೆ ಮಾಡಿದಾಗ ಬೆಳ್ಳಿ ಸಾಮಗ್ರಿ ಅಂಗಡಿ ಕಳ್ಳತನ ಮಾಡಿದ್ದಾಗಿ ಹಾಗೂ ಒಂದೂವರೆ ಕೆಜಿ ಬೆಳ್ಳಿ ಮಾರಾಟಕ್ಕೆ ಹೋಗುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ. ಪೊಲೀಸರು ಬಂಧಿತರಿಂದ ಬೆಳ್ಳಿ ಸಾಮಗ್ರಿ, ಕಾರು, ಮೊಬೈಲ್ ವಶಪಡಿಸಿಕೊಂಡು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.