Advertisement

ಹೊಸ ಅಡಿಕೆಗೆ ಬೇಡಿಕೆ ಹೆಚ್ಚಳ: ಖರೀದಿಗೆ ಪೈಪೋಟಿ ; ಎರಡೇ ದಿನಗಳಲ್ಲಿ ಧಾರಣೆ 15 ರೂ. ಏರಿಕೆ !

08:24 AM May 09, 2020 | Hari Prasad |

ಸುಳ್ಯ: ಎರಡು ದಿನಗಳ ಅಂತರದಲ್ಲಿ ಹೊಸ ಅಡಿಕೆ ಧಾರಣೆ 15 ರೂ.ಗಿಂತ ಅಧಿಕ ಹೆಚ್ಚಳ ಕಂಡಿದೆ. ಕೋವಿಡ್ ಲೌಕ್‌ಡೌನ್‌ ಪರಿಣಾಮ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದರು.

Advertisement

ಇದೀಗ ಧಾರಣೆ ಏರುಮುಖವಾಗಿರುವುದು ಭರವಸೆ ಮೂಡಿಸಿದೆ. ಮಾರುಕಟ್ಟೆಯಲ್ಲಿ ಖರೀದಿಗೆ ಪೈಪೋಟಿ ಕಂಡು ಬರುತ್ತಿದ್ದು, ಇದರಿಂದ ಧಾರಣೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ದಾಸ್ತಾನು ಕೊರತೆ; ಬೇಡಿಕೆ ಹೆಚ್ಚಳ
ಉತ್ತರ ಭಾರತದಲ್ಲಿ ಪಾನ್‌ ಮಸಾಲಕ್ಕಾಗಿ ಮಂಗಳೂರು ಚಾಲಿ ಅಡಿಕೆಗೆ ಸಾಕಷ್ಟು ಬೇಡಿಕೆ ಇದೆ. ಆದರೆ ಒಂದೂವರೆ ತಿಂಗಳಿನಿಂದ ಪೂರೈಕೆ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಅದರ ಜತೆಗೆ ಮೂರು ವರ್ಷಗಳಿಂದ ಕೊಳೆರೋಗ, ವಾತಾವರಣದ ಪ್ರತಿಕೂಲ ಪರಿಣಾಮದಿಂದ ದಕ್ಷಿಣ ಭಾರತದಲ್ಲಿ ಅಡಿಕೆ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಇದರಿಂದ ಕಾನ್ಪುರ, ಕಟಕ್‌, ರಾಜ್‌ಕೋಟ್‌, ಅಹ್ಮದಾಬಾದ್‌ ಸಹಿತ ಉತ್ತರ ಭಾರತದ ದಾಸ್ತಾನು ಕೇಂದ್ರಗಳಲ್ಲಿ ಅಡಿಕೆ ದಾಸ್ತಾನು ಕಡಿಮೆಯಾಗಿದೆ.

ಈ ಹಿಂದೆ ಬರ್ಮಾ, ಬಾಂಗ್ಲಾ ಮೊದಲಾದೆಡೆಯಿಂದ ಅಕ್ರಮವಾಗಿ ಪೂರೈಕೆ ಆಗುತ್ತಿದ್ದ ಅಡಿಕೆ ಈಗ ಶೇ. 90ರಷ್ಟು ನಿಯಂತ್ರಣಕ್ಕೆ ಬಂದಿರುವುದು ದಾಸ್ತಾನು ಕೊರತೆಗೆ ಮತ್ತೂಂದು ಕಾರಣ. ಶ್ರೀಲಂಕಾವು ಹೊರದೇಶಗಳಿಂದ ನೇರ ಆಮದು, ಮರು ರಫ್ತಿಗೆ ನಿಷೇಧ ಹೇರಿರುವುದರಿಂದ ಕಲಬೆರಕೆ, ಕಳ್ಳದಾರಿಯ ಮೂಲಕ ವಿಯೆಟ್ನಾಂ, ಬಾಂಗ್ಲಾ ದೇಶಗಳಿಂದ ಆಮದಾಗುತ್ತಿದ್ದ ಅಡಿಕೆಗೂ ಕಡಿವಾಣ ಬಿದ್ದಿದೆ. ಹಾಗಾಗಿ ಬೇಡಿಕೆ ಕುದುರಿದೆ.

ತೆರೆದ ಅಂಗಡಿ
ಲಾಕ್‌ಡೌನ್‌ ಆರಂಭಗೊಂಡು ಒಂದು ತಿಂಗಳ ಬಳಿಕ ಕ್ಯಾಂಪ್ಕೋ, ಎಪಿಎಂಸಿಗಳು ಮಿತಿ ನಿಗದಿ ಪಡಿಸಿ ಖರೀದಿ ಆರಂಭಿಸಿತ್ತು. ಈಗ ನಿರ್ಬಂಧ ಸಡಿಲಿಸಿದೆ. ಖಾಸಗಿ ಖರೀದಿ ಅಂಗಡಿಗಳು ತೆರೆದಿರುವುದು ಕೂಡ ಧಾರಣೆ ಏರಿಕೆಯ ಪೈಪೋಟಿಗೆ ಕಾರಣ.

Advertisement

ಮೇ 4ರಂದು ಸುಳ್ಯ, ಪುತ್ತೂರು ಮಾರುಕಟ್ಟೆಗಳಲ್ಲಿ ಹೊಸ ಅಡಿಕೆ ಧಾರಣೆೆ 265 ರೂ. ಇತ್ತು. ಮೇ 7ರಂದು ಬೆಳ್ಳಾರೆ ಮಾರುಕಟ್ಟೆಯಲ್ಲಿ 280 ರೂ.ಗೆ ಖರೀದಿ ಆಗಿದೆ. ಅಡಿಕೆ ನಿರೀಕ್ಷಿಗಿಂತಲೂ ಉತ್ತಮ ದರ್ಜೆಯಲ್ಲಿದ್ದರೆ ಇನ್ನಷ್ಟು ಹೆಚ್ಚು ಬೆಲೆ ನೀಡಿ ಖರೀದಿಸಲಾಗುತ್ತಿದೆ.

ಅಂತಾರಾಜ್ಯ ಸಾಗಾಟ ವ್ಯವಸ್ಥೆ ಪುನಾರರಂಭಕ್ಕೆ ಒಂದಷ್ಟು ಸಮಯ ಬೇಕು. ಇದರಿಂದ ಉತ್ತರ ಭಾರತದ ರಾಜ್ಯಗಳಲ್ಲಿ ಅಡಿಕೆ ಕೊರತೆ ತೀವ್ರವಾಗಲಿದೆ. ಈ ಲೆಕ್ಕಾಚಾರದಲ್ಲೇ ಖರೀದಿದಾರರು ಹೆಚ್ಚು ಬೆಲೆ ಕೊಟ್ಟು ಅಡಿಕೆ ಖರೀದಿಸಿ ಮುಂದೆ ಇದರ ಲಾಭ ಪಡೆಯುವ ತಂತ್ರಗಾರಿಕೆ ಹೆಣೆದಿದ್ದಾರೆ. ಅಂತಾರಾಜ್ಯ ಸರಕು ಸಾಗಾಟಕ್ಕೆ ಅನುಮತಿ ಲಭ್ಯವಾದರೆ ಹೊಸ ಅಡಿಕೆಗೆ 300-350 ರೂ. ಗಡಿ ದಾಟುವ ನಿರೀಕ್ಷೆ ಇದೆ ಎಂದು ಕೃಷಿ ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರತಿದಿನ ಏರಿಕೆ
2015ರಲ್ಲಿ ಕೆ.ಜಿ.ಗೆ ಹೊಸ ಅಡಿಕೆಗೆ 200 ರೂ., 2016ರಲ್ಲಿ 250 ರೂ., 2017ರಲ್ಲಿ 180 ರೂ, 2018ರಲ್ಲಿ 220 ರೂ. ಆಸುಪಾಸಿನಲ್ಲಿತ್ತು. 2018ರಲ್ಲಿ 210-220 ರೂ. ವರೆಗೆ ಏರಿತ್ತು. 2019ರ ಆರಂಭದಿಂದ 242 ರೂ.ನಲ್ಲಿ ವ್ಯವಹರಿಸಿತ್ತು. 2020ರ ಮೇ ತಿಂಗಳಲ್ಲಿ ಹೊಸ ಅಡಿಕೆ 280 ರೂ. ಹಳೆ ಅಡಿಕೆ ಧಾರಣೆ 300 ರೂ. ನಷ್ಟದಲ್ಲಿ ಖರೀದಿ ಆಗುತ್ತಿದೆ. ದಿನಂಪ್ರತಿ 3ರಿಂದ 5 ರೂ. ತನಕ ಏರಿಕೆ ಕಂಡುಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next