Advertisement
ಗ್ರಾಮ ದತ್ತು ಸ್ವೀಕಾರಕಳೆದ ಶೈಕ್ಷಣಿಕ ಸಾಲಿನಲ್ಲಿ ಬೆಳಂದೂರು ಗ್ರಾಮವನ್ನು ಕಾಲೇಜಿನ ಎನ್ನೆಸೆಸ್ ಘಟಕವು ಹಸುರೀಕರಣಕ್ಕಾಗಿ ದತ್ತು ತೆಗೆದುಕೊಂಡಿದೆ. ಇದರನ್ವಯ ಪ್ರತೀ ಮನೆ ಆವರಣದಲ್ಲೂ ವಾಣಿಜ್ಯ ಬೆಳೆಗಳಾದ ಅಡಿಕೆ, ನೇಂದ್ರ ಬಾಳೆ ಕಂದು, ಕೊಕ್ಕೋ, ತೆಂಗು, ಕಸಿ ಗೇರು ಗಿಡಗಳನ್ನು ಎನ್ನೆಸೆಸ್ ಘಟಕದ ವಿದ್ಯಾರ್ಥಿಗಳೇ ನೆಟ್ಟು ಅದರ ಸಂಪೂರ್ಣ ಪೋಷಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ವಾಣಿಜ್ಯ ಬೆಳೆಗಳ ಗಿಡ ಕೊಡುವುದರಿಂದ ಮನೆಯವರೂ ಗಿಡಗಳ ಕುರಿತು ನಿಗಾ ವಹಿ ಸುತ್ತಾರೆ ಎಂಬ ದೃಷ್ಟಿಯಿಂದ ಅನುಷ್ಠಾನಗೊಳಿಸಲಾಗಿದೆ ಎಂದು ಎನ್ನೆಸೆಸ್ ಘಟಕದ ಯೋಜನಾಧಿಕಾರಿ ವೆಂಕಟೇಶ್ ಪ್ರಸನ್ನ ಹೇಳುತ್ತಾರೆ.
ಕಳೆದ ವರ್ಷದಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಸುರೀಕರಣದ ಜತೆಗೆ ಕಲಿಕೆಯೊಂದಿಗೆ ಗಳಿಕೆ ಎಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಅವರ ವಿದ್ಯಾಭ್ಯಾಸಕ್ಕೆ ಪೂರಕವಾಗಿರುವ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಅನುಭವ ಹೊಂದುವಂತಾಗುತ್ತಾರೆ. ಇದಕ್ಕಾಗಿ ಎರಡು ಸಹಕಾರಿ ಸಂಘಗಳಲ್ಲಿ, ಮೊಬೈಲ್ ರಿಪೇರಿ ಸಂಸ್ಥೆಗಳಲ್ಲೂ ಮಾತುಕತೆ ನಡೆಸಲಾಗಿದೆ. ವಿದ್ಯಾರ್ಥಿನಿಯರಿಗೆ ಬ್ಯೂಟಿಷಿಯನ್ ತರಬೇತಿ ಕೇಂದ್ರದಲ್ಲೂ ಕಲಿಕೆಯೊಂದಿಗೆ ಗಳಿಕೆ ಕಲ್ಪನೆಯಡಿ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ಎಲ್ಲಾ ಪೂರಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳ ಹಾಗೂ ಪ್ರಾಚಾರ್ಯರ, ಉಪನ್ಯಾಸಕರ ಯೋಜನೆಗಳಿಗೆ ತಕ್ಕಂತೆ ಕಾಲೇಜು ಅಭಿವೃದ್ಧಿ ಸಮಿತಿಯೂ ಸಹಕಾರ ನೀಡುತ್ತಿದೆ ಎಂದು ಹೇಳುತ್ತಾರೆ ಕಾಲೇಜಿನ ಪ್ರಾಚಾರ್ಯ ಪ್ರೊ| ಕೆ. ಪದ್ಮನಾಭ ಅವರು.
Related Articles
ಈ ಬಾರಿ ಕಾಲೇಜಿನಲ್ಲಿ ಅಡಿಕೆ ಸಸಿಗಳ ನರ್ಸರಿ ಮಾಡಲಾಗಿದೆ. ಉತ್ತಮ ತಳಿಯ ಸಾವಿರಕ್ಕೂ ಮಿಕ್ಕಿ ಅಡಿಕೆ ಗಿಡಗಳು ಲಭ್ಯವಿವೆ. ಕಾಲೇಜಿನಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಆವರಣದ ಕೈತೋಟದಲ್ಲಿಯೇ ಬೆಳೆಸ ಲಾಗಿದೆ. ಬಸಳೆ, ಬೆಂಡೆ, ಸೌತೆ, ಬದನೆ, ತೊಂಡೆಕಾಯಿ, ಅಲಸಂಡೆ ಕೃಷಿ ಸಮೃದ್ಧವಾಗಿ ಬೆಳೆದಿದ್ದು ಸ್ವಾವಲಂಬನೆಯತ್ತ ಹೆಜ್ಜೆ ಇಡುತ್ತಿದೆ. ಕಾಲೇಜಿನಲ್ಲಿ ಅಡಿಕೆ ಸಸಿಗಳ ನರ್ಸರಿ ಮಾಡಿರುವುದು.
Advertisement
ಪ್ರವೀಣ್ ಚೆನ್ನಾವರ