Advertisement
ಕೃಷಿಯೇ ದೇಶದ ಬೆನ್ನೆಲುಬು. ಆದರೆ ಕೃಷಿ ಮಾಡಲು, ಮಾಡಿದ ಕೃಷಿಯನ್ನು ರೈತ ಪಡೆಯಲು ಸಂಕಷ್ಟಪಡುತ್ತಿದ್ದಾನೆ. ಕೃಷಿ ಕಾರ್ಯಗಳಿಗೆ ಕಾರ್ಮಿಕರ ಸಮಸ್ಯೆ ಕಾಡುತ್ತಿದ್ದು ಕೃಷಿಕರು ಕಂಗೆಟ್ಟಿದ್ದಾರೆ. ಅದರಲ್ಲೂ ಅಡಿಕೆ, ತೆಂಗಿನ ಮರ ಹತ್ತಿ ಫಸಲು ಇಳಿಸುವ ಪರಿಣತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಸಮಸ್ಯೆಯ ಪರಿಹಾರಕ್ಕೆ ಕೃಷಿ ಮೂಲದ ಕುಟುಂಬದಿಂದ ಬಂದಂತಹ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ವಿದ್ಯಾರ್ಥಿ ಪ್ರಮೀತ್ ಶೆಟ್ಟಿ ತನ್ನ ಸಹಪಾಠಿ ವೆಂಕಟೇಶ್ ಪ್ರಭು ಅವರ ಜತೆ ಸೇರಿ ಸುಲಭ ಉಪಾಯ ಕಂಡುಕೊಂಡಿದ್ದಾರೆ.
ಕೃಷಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ “ಆಟೋಮೇಟೆಡ್ ಕೋಕನಟ್ ಪ್ಲಕ್ಕರ್ ವಿತ್ ಕ್ಯಾಮರಾ’ ಎಂಬ ವಿಶೇಷ ಯಂತ್ರವನ್ನು ಆವಿಷ್ಕಾರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದು ಅಕ್ಷರಶಃ ಕೃಷಿಕರ ಪಾಲಿಗೆ ವರದಾನ. ಅಡಿಕೆ ಮರವಿರಲಿ, ತೆಂಗಿನ ಮರವಿರಲಿ ಈ ಯಂತ್ರಕ್ಕೆ ಸಮಸ್ಯೆಯೇ ಅಲ್ಲ. ಎಷ್ಟೇ ಎತ್ತರ ಮತ್ತು ಯಾವುದೇ ಸುತ್ತಳತೆಯ ಮರವನ್ನಾದರೂ ಇದು ತಾನಾಗಿಯೇ ಏರಬಲ್ಲದು. ದ್ವಿತೀಯ ಪ್ರಶಸ್ತಿ
ಮೂಡಬಿದಿರೆ ಎಸ್.ಎನ್. ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಪ್ರಮೀತ್ ಶೆಟ್ಟಿ ಅವರು ರಾಜ್ಯ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ವತಿಯಿಂದ ಬಾಗಲಕೋಟೆ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ ರಾಜ್ಯಮಟ್ಟದ “ನೀವೇ ಮಾಡಿ ನೋಡಿ’ ತಾಂತ್ರಿಕ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಈ ಯಂತ್ರವನ್ನು ತಯಾರಿಸಿ ಈ ಸಾಧನೆ ಮಾಡಿ ದ್ವಿತೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಡೆಸಿರುವ ಈ ಪ್ರಯತ್ನ ಅಭಿನಂದನೀಯವಾಗಿದೆ. ಇದಕ್ಕೆ ಅವರ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಮತ್ತು ಇನ್ನೋವೇಟಿವ್ ಕ್ಲಬ್ ಸಂಚಾಲಕರ ಸಹಕಾರವಿದೆ.
Related Articles
Advertisement
ಡಿಸ್‌ಪ್ಲೇ ಮೂಲಕ ಚಿತ್ರ ರವಾನೆ ಅಡಿಕೆ, ತೆಂಗಿನ ಕೊಯ್ಲಿಗೆ ಈ ಯಂತ್ರ ಪರಿಣಾಮಕಾರಿಯಾಗಿ ಬಳಕೆ ಮಾಡಬಹುದಾಗಿದೆ. ಅಡಿಕೆಗೆ ಔಷಧ ಸಿಂಪಡಣೆಗೂ ಇದನ್ನು ಬಳಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಗೊನೆಯಲ್ಲಿರುವ ಕೆಲವು ಕಾಯಿಗಳನ್ನಷ್ಟೇ ಕೀಳಬೇಕು ಎಂದಾದರೂ ಇದರಲ್ಲಿ ವ್ಯವಸ್ಥೆಯಿದೆ. ಆಯ್ದ ಕಾಯಿಗಳನ್ನಷ್ಟೇ ಕತ್ತರಿಸಿ ಕೆಳಗೆ ಹಾಕುವ ವ್ಯವಸ್ಥೆ ಇದೆ. 12 ವೋಲ್ಟ್ ಬ್ಯಾಟರಿಯಿಂದ ಚಾಲನೆಗೊಳ್ಳುವ ಈ ಯಂತ್ರ ಒಂದು ಬಾರಿ ಬ್ಯಾಟರಿ ಫುಲ್ ಚಾರ್ಜ್ ಮಾಡಿದರೆ 150 ಮರಗಳಿಂದ ಕಾಯಿ ಕೀಳುವ ಸಾಮರ್ಥ್ಯ ಹೊಂದಿದೆ. ಯಂತ್ರದಲ್ಲಿರುವ ಕೆಮರಾ ಲೆನ್ಸ್ ಸ್ಮಾರ್ಟ್ ಫೋನ್‌ಗೆ ಸಿಗ್ನಲ್ ರವಾನೆ ಮಾಡುವ ಮೂಲಕ ಡಿಸ್‌ಪ್ಲೇ ಮೂಲಕ ಮರದ ತುತ್ತ ತುದಿಯ ಚಿತ್ರಗಳನ್ನೂ ಗೊನೆ, ಕಾಯಿಗಳ ವೀಕ್ಷಣೆಯನ್ನೂ ಸುಲಭದಲ್ಲಿ ಮಾಡಬಹುದಾಗಿದೆ. – ರತ್ನದೇವ್ ಪುಂಜಾಲಕಟ್ಟೆ