ನೆಲಮಂಗಲ: ತಾಲೂಕಿನ ಅರೆಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಅನಾರೋಗ್ಯದಿಂದ ರಜೆ ಹಾಕಿದ ವಿಚಾರವಾಗಿ ದೊಡ್ಡ ಹೈಡ್ರಾಮಾವೇ ನಡೆದು ದಲಿತ ಪರ ಸಂಘಟನೆಗಳ ಪ್ರತಿಭಟನೆಯ ನಂತರ ಅಧ್ಯಕ್ಷೆ ರಜೆ ವಾಪಸ್ ಪಡೆದಿರುವ ಘಟನೆ ಬುಧವಾರ ನಡೆದಿದೆ.
ಏನಿದು ಪ್ರಕರಣ: ಅರೆಬೊಮ್ಮನಹಳ್ಳಿ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಸ್ಥಾನವಿದ್ದ ಪರಿಣಾಮ ನೇತ್ರಾವತಿ ಲಕ್ಷ್ಮಣ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಸ್ಥಾನ ಮೀಸಲಿನಿಂದ ಗೌರಮ್ಮ ಅವರನ್ನು ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆ ಮಾಡಿದ್ದರು. ಅನಂತರ ಅಧ್ಯಕ್ಷೆ ನೇತ್ರಾವತಿ ಗರ್ಭಕೋಶ ಚಿಕಿತ್ಸೆಯಿಂದ ಅನಾರೋಗ್ಯಕ್ಕೆ ಒಳಗಾದ ಪರಿಣಾಮ ನಾವು ಕೆಲಸ ಮಾಡಲು ಸಾಧ್ಯವಿಲ್ಲ ರಜೆ ಬೇಕು ಎಂದು ತಾಪಂ ಇಒ ಅವರಿಗೆ ಪತ್ರ ನೀಡಿದ್ದ ಹಿನ್ನಲೆ, ಉಪಾಧ್ಯಕ್ಷೆ ಗೌರಮ್ಮ ಪ್ರಭಾರ ಅಧ್ಯಕ್ಷರಾಗಿ ಬುಧವಾರ ಬೆಳಗ್ಗೆ ಕಚೇರಿಯ ಅಧ್ಯಕ್ಷರ ಕೊಠಡಿಗೆ ಪೂಜೆ ಸಲ್ಲಿಸಿ ಅಧ್ಯಕ್ಷರ ಚೇರಿನಲ್ಲಿ ಕುಳಿತು ನಾಳೆಯಿಂದ ಪ್ರಭಾರ ಅಧ್ಯಕ್ಷರು ಎಂಬುದಾಗಿ ಹೇಳಿಕೊಂಡಿದ್ದರು.
ಸಹಿ ಪಡೆದು ಪ್ರಕರಣಕ್ಕೆ ಬ್ರೇಕ್: ಆದರೆ, ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಅನಾರೋಗ್ಯವಿರುವುದು ಸತ್ಯ, ಕೆಲ ಪ್ರಭಾವಿ ಮುಖಂಡರು ಪ್ರಭಾವ ಬೆಳಸಿ ಪರಿಶಿಷ್ಟ ಜಾತಿ ಸ್ಥಾನದ ಅಧ್ಯಕ್ಷರಿಗೆ ಅಧಿಕಾರ ನಡೆಸಬಾರದು ಎಂಬ ದುರುದ್ದೇಶದಿಂದ ಅವರಿಂದ 1 ವರ್ಷ 2 ತಿಂಗಳು ರಜೆ ಪಡೆದು ಉಪಾಧ್ಯಕ್ಷರನ್ನು ಪ್ರಭಾರ ಅಧ್ಯಕ್ಷರಾಗಿ ಮಾಡಿದ್ದಾರೆ. ಇದು ಕಾನೂನುಬಾಹಿರ, ಸಮುದಾಯಕ್ಕೆ ಮಾಡಿದ ಅವಮಾನ ಎಂದು ದಲಿತಪರ ಸಂಘಟನೆಗಳು ಪ್ರತಿ ಭಟನೆ ಮಾಡಿದರು. ನಂತರ ಪಿಡಿಒ ಗ್ರಾಪಂ ಅಧ್ಯಕ್ಷೆ ನೇತ್ರವತಿ ಅವರಿಂದ ರಜೆ ವಾಪಸ್, ಅಧ್ಯಕ್ಷರಾಗಿ ಮುಂದುವರಿಯುವುದಾಗಿ ಸಹಿ ಪಡೆದು ಪ್ರಕರಣಕ್ಕೆ ಬ್ರೇಕ್ ಹಾಕಿದರು.
ಪ್ರತಿಭಟನೆಗೆ ನ್ಯಾಯ ಸಿಕ್ಕಿದೆ: ನಮ್ಮ ಪಂಚಾಯಿತಿ ಯಲ್ಲಿ ನಾಲ್ಕು ಜನ ಪರಿಶಿಷ್ಟ ಜಾತಿಯ ಸದಸ್ಯರಿದ್ದು, ಈ ಬಾರಿ ಅಧ್ಯಕ್ಷ ಸ್ಥಾನ ಬಂದಿದೆ. ಆದರೆ, ಕೆಲ ಪ್ರಭಾವಿಗಳು ಅಧ್ಯಕ್ಷೆ ನೇತ್ರಾವತಿ ಕೆಲಸ ಮಾಡಲು ಬಿಡದೇ, ಸಾಮಾನ್ಯಸಭೆಯನ್ನು ಮಾಡದೇ ಸಮಸ್ಯೆ ಮಾಡಿದ್ದಲ್ಲದೇ, ಪ್ರಭಾವ ಬೆಳೆಸಿ ಕಾನೂನುಬಾಹಿರವಾಗಿ ಉಪಾಧ್ಯಕ್ಷರು, ಅಧ್ಯಕ್ಷ ಸ್ಥಾನಕ್ಕೆ ಅಧಿಕಾರ ಚಲಾಯಿಸಿದ್ದಾರೆ. ಆದ್ದರಿಂದ, ಪ್ರತಿಭಟನೆ ಮಾಡಿದ್ದು ನ್ಯಾಯ ಸಿಕ್ಕಿದೆ ಎಂದು ಗ್ರಾಪಂ ಸದಸ್ಯ ರಂಗಸ್ವಾಮಿ ಹೇಳಿದರು. ಪ್ರಭಾರ ಪಿಡಿಒ ಗಂಗಾಧರ್, ದಲಿತ ಪರ ಸಂಘಟನೆಗಳ ಪದಾಧಿಕಾರಿಗಳಿದ್ದರು.
ದಲಿತರ ಅಧಿಕಾರ ಕಿತ್ತುಕೊಳ್ಳುವ ಹುನ್ನಾರ: ಆರೋಪ: ಒಂದು ತಿಂಗಳಿನ ಹಿಂದೆ ಅಧಿಕಾರಕ್ಕೆ ಬಂದ ಅಧ್ಯಕ್ಷೆಗೆ ಆರೋಗ್ಯ ಸಮಸ್ಯೆ ಇತ್ತು. ಕೆಲವರು ಒತ್ತಡ ಏರುತ್ತಿದ್ದಾರೆ ಎಂದು ದೂರು ಬಂದಿತ್ತು. ಒಂದು ವರ್ಷ ರಜೆ ತೆಗೆದುಕೊಳ್ಳುವಷ್ಟು ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ತಾಲೂಕಿನಲ್ಲಿ ಕೆಲವು ಪಂಚಾಯಿತಿಗಳಲ್ಲಿ ದಲಿತರ ಅಧಿಕಾರ ಕಿತ್ತುಕೊಳ್ಳಲು ಹೊರಟಿದ್ದಾರೆ. ಈ ಕ್ರಮದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ದಲಿತ ಪರ ಸಂಘಟನೆ ಮುಖ್ಯಸ್ಥ ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಿದರು.
ಅರೆಬೊಮ್ಮನಹಳ್ಳಿ ಅಧ್ಯಕ್ಷರು ಅನಾರೋಗ್ಯ ಕಾರಣ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ರಜೆ ನೀಡಿದ್ದರು, ಎಷ್ಟು ದಿನ ಎಂದು ನೀಡಿರಲಿಲ್ಲ, ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಪ್ರಭಾರ ಅಧ್ಯಕ್ಷರಾಗಿರುತ್ತಾರೆ. ಆ ನಿಟ್ಟಿನಲ್ಲಿ ಬದಲಾವಣೆಯಾಗಿತ್ತು. ಆದರೆ, ಈಗ ಅಧ್ಯಕ್ಷರು ಚಿಕಿತ್ಸೆಯಿಂದ ವಾಪಸ್ ಬಂದಿದ್ದಾರೆ. ನಾವೇ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದ್ದಾರೆ. ಅವರೇ ಮುಂದುವರಿಯುತ್ತಾರೆ.
– ಮಧು, ತಾಲೂಕು ಪಂಚಾಯಿತಿ ಇಒ