ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಕೊಲೆ, ಅತ್ಯಾಚಾರ ಸೇರಿ ಕೆಲ ಘೋರ ಅಪರಾಧ ಪ್ರಕ ರಣಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಿರುವ ಶಿವಕುಮಾರ್, ರಾಕೇಶ್ ಸೇರಿ 20 ಮಂದಿ ಇಡೀ ಜೈಲಿನಲ್ಲಿ ನಿಯಂತ್ರಣ ಸಾಧಿಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಕೆಲ ಕೈದಿಗಳು ಇತರೆ ಕೈದಿಗಳ ದಿನಚರಿಯನ್ನು ನಿರ್ಧರಿಸುವವರಾಗಿದ್ದಾರೆ.
ಕೆಲವರು ತಾಂತ್ರಿಕ ವಿಭಾಗದಲ್ಲೂ ನಿಯಂತ್ರಣ ಹೊಂದಿದ್ದಾರೆ. ಪ್ರಮುಖವಾಗಿ ಶಿವಕುಮಾರ್ ಎಂಬಾತ ಜೈಲಿನ ಕೆಲ ಅಧಿಕಾರಿಗಳ ಜತೆ ಚೆನ್ನಾಗಿದ್ದು, ಎಲ್ಲ ರೀತಿಯ ಸೌಲಭ್ಯ ಅನುಭವಿಸುತ್ತಿದ್ದಾನೆ. ರಾತ್ರಿ ವೇಳೆ ನಡೆಯುವ ಕೆಲ ಅಕ್ರಮಗಳು ಕೂಡ ಈತನ ನೇತೃತ್ವದಲ್ಲಿ ನಡೆಯುತ್ತಿವೆ. ಅಲ್ಲದೇ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತೆಲಗಿ ಕೊಠಡಿ ಮುಂಭಾಗದ ಕೊಠಡಿಯಲ್ಲಿದ್ದ ವಸ್ತುಗಳನ್ನು ರಾತ್ರೋರಾತ್ರಿ ಶಿವಕುಮಾರ್ ಮತ್ತು ತಂಡ ಬೇರೆಡೆ ಸ್ಥಳಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.
ಜೈಲಿನಲ್ಲೇ ಎರಡು ಗುಂಪುಗಳು: ಶನಿವಾರ ಕಾರಾಗೃಹ ಇಲಾಖೆ ಡಿಜಿ ಹಾಗೂ ಡಿಐಜಿ ಭೇಟಿ ನೀಡಿದ ಬಳಿಕ ಜೈಲಿನಲ್ಲಿ ಇಬ್ಬರು ಅಧಿಕಾರಿಗಳ ಪರ-ವಿರೋಧ ಗುಂಪುಗಳು ಹುಟ್ಟಿಕೊಂಡಿವೆ. ಇದು ಕೈದಿಗಳ ಸ್ಥಳಾಂತರ ಪ್ರಕ್ರಿಯೆಗೆ ಕಾರಣವಾಗಿದೆ. ಡಿಜಿಪಿ ಸತ್ಯನಾರಾಯಣರಾವ್ ಮತ್ತು ರೂಪಾ ಶನಿವಾರ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ಕೈದಿಗಳಾದ ರಾಮಮೂರ್ತಿ, ಅನಂತಮೂರ್ತಿ, ಚಂದ್ರು ನೇತೃತ್ವದಲ್ಲಿ ನೂರಾರು ಕೈದಿಗಳು ಜೈಲಿನ ಲೋಪಗಳ ಬಗ್ಗೆ ಡಿಐಜಿಗೆ ವಿವರಣೆ ನೀಡಿದ್ದರು. ಇದನ್ನು ರೂಪಾ ತಮ್ಮ ಖಾಸಗಿ ಹ್ಯಾಂಡಿ ಕ್ಯಾಮರಾದಲ್ಲಿ ದಾಖಲಿಸಿಕೊಳ್ಳುತ್ತಿದ್ದರು. ಈ
ವೇಳೆ ಅಧೀಕ್ಷಕ ಕೃಷ್ಣಕುಮಾರ್ ಪರವಾದ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಶಿವಕುಮಾರ್, ರಾಕೇಶ ಸೇರಿ 20 ಮಂದಿಯ ತಂಡ ವಿರೋಧಿಸಿದ್ದಲ್ಲದೇ, ಹಲ್ಲೆಗೆ ಮುಂದಾಗಿದೆ. ಈ ವೇಳೆ ಒಂದು ತಂಡ ರೂಪಾ ಅವರ ಬಳಿ ತಮ್ಮ ನೋವುಗಳನ್ನು ಹೇಳಿಕೊಳ್ಳಬೇಕು ಎಂದು ಒತ್ತಾಯಿಸಿದರೆ, ಮತ್ತೂಂದು ಗುಂಪು ಡಿಜಿಪಿ ಸತ್ಯನಾರಾಯಣರಾವ್ ಪರ ಘೋಷಣೆ ಕೂಗಿದೆ.
ಪರಿಸ್ಥಿತಿ ನಿಯಂಂತ್ರಣಕ್ಕೆ ಆಗಮಿಸಿದ್ದ ಪೊಲೀಸರು ಮತ್ತು ಜೈಲು ಸಿಬ್ಬಂದಿ ದಾಂಧಲೆಗೆ ಮುಂದಾಗಿದ್ದ 32 ಕೈದಿಗಳ ಪಟ್ಟಿ ಸಿದ್ದಪಡಿಸಿದ್ದಾರೆ. ನಂತರ ಒಬ್ಬೊಬ್ಬರನ್ನೇ ಕರೆಸಿ ದಾಂಧಲೆ ನಡೆಸಿದ ಆರೋಪ ಹೊರಿಸಿ, ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದವರೆಲ್ಲ ರೂಪಾ ಗುಂಪಿನ ಕೈದಿಗಳೇ ಎನ್ನಲಾಗಿದೆ.
ಈ ಹಿಂದೆಯೂ ಪ್ರತಿಭಟನೆ: ರೂಪಾ ಅವರು ಜೈಲಿಗೆ ಭೇಟಿ ನೀಡುವ ಮೊದಲು ಜೈಲಿನ ನಿಯಮಗಳ ಪ್ರಕಾರ ಸೌಲಭ್ಯ ಕೊಡುವಂತೆ ಒತ್ತಾಯಿಸಿ ನೂರಾರು ಕೈದಿಗಳ ಗುಂಪು ಪ್ರತಿಭಟನೆ ನಡೆಸಿತ್ತು ಎನ್ನಲಾಗಿದೆ. ಇದೀಗ ಸ್ಥಳಾಂತರಗೊಂಡ ಕೈದಿಗಳ ಪೈಕಿ ಪ್ರತಿಭಟನೆ ನಡೆಸಿದವರೂ ಇದ್ದಾರೆ ಎನ್ನಲಾಗಿದೆ. ಬಳಿಕ ರೂಪಾ ಅವರು ಜೈಲಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವ ವೇಳೆ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಅಳಲುತೊಡಿದ್ದಾರೆ. ಇದೇ ಕೈದಿಗಳಿಗೆ ಮುಳುವಾಗಿದ್ದು, ನ್ಯಾಯಾಲಯ ವಿಧಿಸಿದ ಶಿಕ್ಷೆಯೊಂದಿಗೆ ಜೈಲಿನ ಅಧಿಕಾರಿಗಳು ಕೊಡುವ ವೈಯಕ್ತಿಕ ಹಿಂಸೆಯನ್ನೂ
ಅನುಭವಿಸುವಂತಾಗಿದೆ.