ಪಟ್ನಾ : ಅತ್ಯಂತ ವಿಚಿತ್ರ ಎನ್ನಬಹುದಾದ ಪ್ರಕರಣವೊಂದರಲ್ಲಿ ಇಲ್ಲಿನ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಐಜಿಐಎಂಎಸ್) ತನ್ನ ಮಹಿಳಾ ಉದ್ಯೋಗಿಗಳಿಗೆ ತಮ್ಮ ಕನ್ಯತ್ವವನ್ನು ಘೋಷಿಸುವಂತೆ ಕೇಳಿಕೊಂಡಿದೆ. ಮಾತ್ರವಲ್ಲದೆ ಪುರುಷ ಉದ್ಯೋಗಿಗಳಿಗೆ ತಮ್ಮ ವೈವಾಹಿಕ ಸಂಬಂಧದಲ್ಲಿರುವ ಪತ್ನಿಯರ ಸಂಖ್ಯೆಯನ್ನು ಘೋಷಿಸುವಂತೆ ತಾಕೀತು ಮಾಡಿದೆ.
ಐಜಿಐಎಂಎಸ್ ತನ್ನ ಉದ್ಯೋಗಿಗಳಿಗೆ ನೀಡಿರುವ ಸ್ಥಿತಿಗತಿ ಘೋಷಣಾ ನಮೂನೆಯಲ್ಲಿ ಉದ್ಯೋಗಿಗಳು ತಾವು ವಿಧುರರೇ, ಅವಿವಾಹಿತರೇ ಅಥವಾ ಕನ್ಯತ್ವವನ್ನು ಉಳಿಸಿಕೊಂಡಿರುವವರೇ ಎಂಬುದನ್ನು ತಿಳಿಸಬೇಕಾಗಿದೆ.
ಐಜಿಐಎಂಎಸ್ ತನ್ನ ಮಹಿಳಾ ಉದ್ಯೋಗಿಗಳಿಗೆ “ಇತರ ಜೀವಂತ ಪತ್ನಿ ಇಲ್ಲದ ವ್ಯಕ್ತಿಯನ್ನು ನಾನು ಮದುವೆಯಾಗಿದ್ದೇನೆ’ ಎಂದು ಘೋಷಿಸಿಕೊಳ್ಳುವಂತೆಯೂ ಪುರುಷ ಉದ್ಯೋಗಿಗಳು “ವಿವಾಹಿತನಾಗಿದ್ದೇನೆ ಮತ್ತು ಒಂದಕ್ಕಿಂತ ಹೆಚ್ಚು ಪತ್ನಿಯನ್ನು ಹೊಂದಿದ್ದೇನೆ’ ಎಂದು ಘೋಷಿಸಿಕೊಳ್ಳುವಂತೆಯೂ ಕೇಳಿಕೊಂಡಿದೆ.
ಈ ಘೋಷಣಾ ಪತ್ರದಲ್ಲಿ ಉದ್ಯೋಗಿಗಳು ಸಹಿ ಹಾಕುವಲ್ಲಿ ಹೀಗೊಂದು ಒಕ್ಕಣೆ ಇದೆ :
“ಕೆಳಗೆ ಹೇಳಲಾಗಿರುವ ಕಾರಣಗಳನ್ನು ಪರಿಗಣಿಸಿ, ಒಂದಕ್ಕಿಂತ ಹೆಚ್ಚು ಜೀವಂತ ಪತ್ನಿಯನ್ನು ಹೊಂದಿರುವ ವ್ಯಕ್ತಿಯನ್ನು ಸೇವೆಗೆ ನೇಮಿಸಿಕೊಳ್ಳುವಲ್ಲಿ ಇರುವ ನಿರ್ಬಂಧದಿಂದ ನನಗೆ ವಿನಾಯಿತಿ ನೀಡಬೇಕು ಎಂದು ನಾನು ಕೋರುತ್ತೇನೆ’.
ಈ ರೀತಿಯ ವಿಚಿತ್ರ ಘೋಷಣಾ ಪತ್ರವನ್ನು ಉದ್ಯೋಗಿಗಳಿಗೆ ನೀಡುವ ಮೂಲಕ ವಿವಾದ ಸೃಷ್ಟಿಸಿರುವ ಐಜಿಐಎಂಎಸ್ ಈಚೆಗೆ ತಪ್ಪು ಕಾರಣಕ್ಕಾಗಿ ಸುದ್ದಿಯಲ್ಲಿತ್ತು.
ಕ್ಯಾನ್ಸರ್ ಪೀಡಿತನಾಗಿ ಮೃತ ಪಟ್ಟ ತನ್ನ ಐದು ವರ್ಷ ಪ್ರಾಯದ ಪುತ್ರನನ್ನು ಅಂತ್ಯಕ್ರಿಯೆಗೆ ಒಯ್ಯಲು ಅಂಬುಲೆನ್ಸ್ ನೀಡುವಂತೆ ಮಗುವಿನ ತಂದೆ ಮಾಡಿಕೊಂಡಿದ್ದ ಕೋರಿಕೆಯನ್ನು ಐಜಿಐಎಂಎಸ್ ತಿರಸ್ಕರಿಸಿದ ಕಾರಣಕ್ಕೆ ಕೊನೆಗೆ ಆ ದುಃಖತಪ್ತ ತಂದೆ ತನ್ನ ಮಗುವಿನ ಶವವನ್ನು ಹೆಗಲ ಮೇಲೆ ಮಸಣಕ್ಕೆ ಒಯ್ದಿದ್ದರು.