ಶಿಡ್ಲಘಟ್ಟ : ಪಶ್ಚಿಮ ಬಂಗಾಳದ ದಾರ್ಜಿಲಿಂಗ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ವೀರಮರಣವನ್ನಪ್ಪಿದ ತಾಲೂಕಿನ ಯಣ್ಣಂಗೂರು ಗ್ರಾಮದ ಯೋಧ ಗಂಗಾಧರ್ ಅವರ ಪಾರ್ಥಿವ ಶರೀರ 4 ದಿನಗಳ ಬಳಿಕ ಹುಟ್ಟೂರಿಗೆ ಬಂದು ತಲುಪಿದ್ದು ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಪಾರ್ಥೀವ ಶರೀರ ತರಲು ವಿಳಂಬವಾದುದಕ್ಕೆ ಮೃತ ಯೋಧನ ಕುಟುಂಬದವರು,ಸಂಬಂಧಿಕರು ಹಾಗೂ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ರಾಜಕಾರಣಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತ ಪಡಿಸಿದರು.
ಪಾರ್ಥೀವ ಶರೀರವನ್ನು ಶಿಡ್ಲಘಟ್ಟ ನಗರದಲ್ಲಿ ಶನಿವಾರ ಬೆಳಗ್ಗೆ 8 ರಿಂದ 9 ಗಂಟೆವರೆಗೂ ಮೆರವಣಿಗೆ ಮಾಡುವ ಮೂಲಕ ಮನೆಗೆ ತರಲಾಯಿತು. ಸಾವಿರಾರು ಜನರು ಈ ವೇಳೆ ಕಂಬನಿ ಮಿಡಿದರು.
ತಾಯಿಯ ಆಕ್ರೋಶ,ರಾಜಕಾರಣಿಗಳಿಗೆ ತರಾಟೆ
ಅಂತಿಮ ಯಾತ್ರೆಯ ವೇಳೆ ಹಾಜರಿದ್ದ ರಾಜಕಾರಣಿಗಳ ಬಳಿ ಆಕ್ರೋಶ ಹೊರ ಹಾಕಿದ ಯೋಧ ಗಂಗಾಧರ್ ತಾಯಿ ಲಕ್ಷ್ಮಮ್ಮ
”ಯೋಧರ ಬಗ್ಗೆ ಸರ್ಕಾರಕ್ಕೆ ಇಷ್ಟು ಅಸಡ್ಡೆ ಯಾಕೆ ? ಶವ ತರಲು ನಾಲ್ಕು ದಿನ ಬೇಕೆ ? ನಾನು ನನ್ನ ಇಬ್ಬರು ಮಕ್ಕಳನ್ನು ದೇಶ ಸೇವೆಗೆ ನೀಡಿದ್ದೇನೆ ? ರಾಜಕಾರಣಿಗಳೇ ನಿವ್ಯಾರಾದರು ಮಕ್ಕಳನ್ನು ಸೇನೆಗೆ ನೀಡಿದ್ದೀರಾ? ರಾಜಕಾರಣಿಗಳು ಮೃತ ಪಟ್ಟರೆ ಹೀಗಾಗುತ್ತದಾ?” ಎಂದು ಗೋಳಿಡುತ್ತಾ ಪ್ರಶ್ನಿಸಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ,ಮಾಜಿ ಮುಖ್ಯಮಂತ್ರಿ, ಸಂಸದ ವೀರಪ್ಪ ಮೊಯ್ಲಿ ಮೂಕ ಪ್ರೇಕ್ಷಕನಾಗಿ ನಿಂತಿದ್ದರು .
ಗಂಗಾಧರ್ ಸೋದರ ರವಿಕುಮಾರ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.