Advertisement

ದೂರುವ ಆಟ ನಿಮಗಿಷ್ಟವೇನು?

09:08 AM Mar 01, 2020 | mahesh |

ನಾನೇ ನನಗೆ ಗೌರವ/ಮೌಲ್ಯ ಕೊಟ್ಟುಕೊಳ್ಳುವುದಿಲ್ಲ ಎಂದರೆ, ನನ್ನನ್ನು ನಾನೇ ಪ್ರೀತಿಸುವುದಿಲ್ಲ ಎಂದರೆ, ಬೇರೆಯವರ್ಯಾಕೆ ನನ್ನನ್ನು ಗೌರವಿಸುತ್ತಾರೆ? ಪ್ರೀತಿಸುತ್ತಾರೆ? ಯಾರೋ ಒಬ್ಬರು ವಜ್ರವನ್ನು “ಕಲ್ಲು’ ಎಂದು ಕರೆದಾಕ್ಷಣ, ಅದೇನೂ ಕಲ್ಲಾಗುವುದಿಲ್ಲವಲ್ಲ?

Advertisement

ನಿಮ್ಮಲ್ಲಿ ಎಷ್ಟು ಮಂದಿ, ಜೀವನದಲ್ಲಿನ ಸಂಕಷ್ಟಗಳಿಗೆಲ್ಲ ಪರಿಸ್ಥಿತಿಯನ್ನೋ ಅಥವಾ ನಿಮ್ಮ ಸುತ್ತಲಿನ ಜನರನ್ನೋ ದೂರುತ್ತೀರಿ? ನನ್ನ ಅಮ್ಮ(ಪ್ರೋತಿಮಾ ಬೇಡಿ) ನನಗೆ ಯಾವಾಗಲೂ ಒಂದು ಮಾತು ಹೇಳುತ್ತಿದ್ದಳು- “”ನಿನ್ನ ಮನೋಧೋರಣೆಯೇ ಎಲ್ಲವನ್ನೂ ನಿರ್ಧರಿಸುತ್ತದೆ” ಅಂತ. ಉದಾಹರಣೆಗೆ, ಯಾರೋ ನನ್ನ ಜತೆ ಸರಿಯಾಗಿ ವ್ಯವಹರಿಸಲಿಲ್ಲ ಎಂದುಕೊಳ್ಳಿ, ಆಗ ನನ್ನ ಮುಂದೆ ಹಲವು ಆಯ್ಕೆಗಳು ಎದುರಾಗುತ್ತವೆ. ಒಂದೋ ಆ ವಿಷಯವನ್ನು ಹಿಡಿದುಕೊಂಡು ನಾನು ಬೇಜಾರು ಮಾಡಿಕೊಂಡು ಕೂರಬಹುದು ಅಥವಾ ಕಡೆಗಣಿಸಬಹುದು, ಇಲ್ಲವೇ ನಕ್ಕು ಸುಮ್ಮನಾಗಬಹುದು. ಬೇರೆಯವರು ನನ್ನ ಬಗ್ಗೆ ಏನಂದುಕೊಳ್ಳುತ್ತಾರೋ ಎನ್ನುವುದಕ್ಕಿಂತ, ನಾನು ನನ್ನ ಬಗ್ಗೆ ಏನಂದುಕೊಳ್ಳುತ್ತೇನೆ ಎನ್ನುವುದು ಬಹಳ ಮುಖ್ಯವಾದದ್ದು. ಏಕೆಂದರೆ, ನನ್ನ ಜತೆಗೆ ಜೀವಿಸಬೇಕಾದವಳು ನಾನು! ನಾನೇ ನನಗೆ ಗೌರವ/ಮೌಲ್ಯ ಕೊಟ್ಟುಕೊಳ್ಳುವುದಿಲ್ಲ ಎಂದರೆ, ನನ್ನನ್ನು ನಾನೇ ಪ್ರೀತಿಸುವುದಿಲ್ಲ ಎಂದರೆ, ಬೇರೆಯವರ್ಯಾಕೆ ನನ್ನನ್ನು ಗೌರವಿಸುತ್ತಾರೆ? ಪ್ರೀತಿಸುತ್ತಾರೆ?

ಯಾರೋ ಒಬ್ಬರು ವಜ್ರವನ್ನು “ಕಲ್ಲು’ ಎಂದು ಕರೆದಾಕ್ಷಣ, ಅದೇನೂ ಕಲ್ಲಾಗುವುದಿಲ್ಲವಲ್ಲ? ಯಾರೋ ನಿಮಗೆ ಹಿಂದಿರುಗಿ ಮೆಸೇಜ್‌ ಮಾಡಲಿಲ್ಲ ಎಂಬ ಕಾರಣಕ್ಕೆ ನೀವು ಬೇಸರ ಮಾಡಿಕೊಳ್ಳುತ್ತೀರಾ? ಅಥವಾ ನಿಮ್ಮ ಹೊಸ ದಿರಿಸನ್ನು ನೋಡಿ ಮೆಚ್ಚಲಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತೀರಾ? ನಿಮ್ಮ ಸಂಗಾತಿಯು ದಿನಕ್ಕೆ ಎಷ್ಟು ಬಾರಿ ಕಾಲ್‌ ಮಾಡುತ್ತಾರೆ ಎನ್ನುವುದರ ಮೇಲೆ ನಿಮ್ಮ ಸಂತೋಷವು ಆಧರಿಸಿದೆಯೇ? Self worthನ ಕೊರತೆ ನಮ್ಮನ್ನೆಲ್ಲ ಚಿಕ್ಕ ವಯಸ್ಸಿನಿಂದಲೇ ಕಾಡುತ್ತಿದೆ. ನಾವು ಇತರರಿಂದ ಶ್ಲಾಘನೆ/ಮೆಚ್ಚುಗೆ ಬಯಸುತ್ತೇವೆ, ನಮ್ಮನ್ನು ಬೇರೆಯವರು ಗಮನಿಸಲಿ ಎಂದು ಆಶಿಸುತ್ತೇವೆ. ಇದು ಸಿಗದೇ ಹೋದಾಗ ಒದ್ದಾಟ ಆರಂಭವಾಗುತ್ತದೆ.

ಆದರೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವ, ಗೌರವಿಸಿಕೊಳ್ಳುವ ಗುಣ ರಾತ್ರೋರಾತ್ರಿ ಬರುವಂಥದ್ದಲ್ಲ. ಅದರಲ್ಲೂ ನೀವು ದಶಕಗಳಿಂದ ಕೀಳರಿಮೆ ಅನುಭವಿಸುತ್ತಿದ್ದರೆ, ಈ ಗುಣ ಬೆಳೆಸಿಕೊಳ್ಳುವುದಕ್ಕೆ ಸಮಯ ಹಿಡಿಯುತ್ತದೆ.

“”ನಾನು ದಡ್ಡ, ನಾನು ಮೂರ್ಖ, ನಾನು ದಪ್ಪಗಿದ್ದೀನಿ, ಅಸಹ್ಯವಾಗಿದ್ದೀನಿ, ಮೈಗಳ್ಳ-ಮೈಗಳ್ಳಿ, ನಾನು ತುಂಬಾ ಬೋರಿಂಗ್‌ ಇತ್ಯಾದಿ” ಮಾತುಗಳು ನಮ್ಮ ಆತ್ಮಸಮ್ಮಾನವನ್ನು ಅಡ್ಡಗಾಲಾಗುತ್ತವೆ. ಹೌದು, ಖಚಿತವಾಗಿಯೂ ವೈಫ‌ಲ್ಯಗಳು, ಅಪಮಾನಗಳು ನೋವುಕೊಡುವ ಅಂಶಗಳೇ. ಆದರೆ, ಒಂದು ವಿಷಯ ಅರ್ಥಮಾಡಿಕೊಳ್ಳಿ ಇನ್ನೊಬ್ಬ ಸಹಜೀವಿಯನ್ನು ಭೇಟಿಯಾದಾಗ ಈ ರೀತಿಯ ಅನುಭವಗಳು ಎದುರಾಗುವುದು ತೀರಾ ಸಹಜವೇ.

Advertisement

ಕೆಟ್ಟ ಅನುಭವಗಳಾಗುವುದು ಸಹಜವೇ. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಆ ಅನುಭವಗಳು ನಿಮ್ಮನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿವೆಯೇ? ಎನ್ನುವುದು ಮುಖ್ಯ. ಕೆಟ್ಟ ಅನುಭವಗಳು ನಿಮ್ಮನ್ನು ದುರ್ಬಲರನ್ನಾಗಿಸಿದವೇ ಅಥವಾ ನೀವು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದೀರಾ? ಎನ್ನುವುದು ಮುಖ್ಯ. ನಿಮ್ಮನ್ನು ನೀವು ಪ್ರೀತಿಸಬೇಕು, ಗೌರವಿಸಬೇಕು ಎಂದರೆ, ನಿಮ್ಮನ್ನು ರೂಪಿಸುವ “ಅನುಭವಗಳನ್ನು’ ದ್ವೇಷಿಸಬಾರದಲ್ಲವೇ? ಯಾವುದು ನಿಮ್ಮನ್ನು ಸಾಯಿಸುವುದಿಲ್ಲವೋ, ಅದು ನಿಮ್ಮನ್ನು ಬಲಿಷ್ಠಗೊಳಿಸುತ್ತದೆ ಎಂಬ ಮಾತಿದೆ. ಸುಮ್ಮನೇ ಪರಿಸ್ಥಿತಿಗಳನ್ನೋ, ಜನರನ್ನೋ ದೂರುತ್ತಾ ಕೂಡಬೇಡಿ. ನಿಮ್ಮನ್ನು ರೂಪಿಸಿದ ಅನುಭವಗಳಿಗೆ(ಕೆಟ್ಟವೇ ಇರಲಿ, ಒಳ್ಳೆಯವೇ ಇರಲಿ) ಮತ್ತು ವ್ಯಕ್ತಿಗಳಿಗೆ ಒಮ್ಮೆ ಥ್ಯಾಂಕ್ಯೂ ಹೇಳಿಬಿಡಿ.

ಸುಳ್ಳಿನ ಮುಖವಾಡ ಕಳಚಿ
ಒಂದು ಸುಳ್ಳನ್ನು ಪದೇ ಪದೆ ಹೇಳಿದರೆ, ಅದೇ ಸತ್ಯವಾಗಿಬಿಡಬಹುದು ಎನ್ನುವ ಮಾತಿದೆ. ಮನೋವಿಜ್ಞಾನಿಗಳು “ನೆನಪು’ಗಳ ಬಗ್ಗೆ ಸಾಮಾನ್ಯವಾಗಿ ಈ ಮಾತು ಹೇಳುತ್ತಿರುತ್ತಾರೆ. ಉದಾಹರಣೆಗೆ, 30 ವರ್ಷದ ಹಿಂದೆ ಯಾವುದೋ ದೊಡ್ಡ ಜಗಳ ನಡೆದಿತ್ತು ಎಂದುಕೊಳ್ಳಿ. ಆ ಜಗಳದಲ್ಲಿ ಭಾಗಿಯಾದ ಜನರನ್ನು ಈಗ ಮಾತನಾಡಿಸಿ ನೋಡಿ. ಅಂದು ಏನಾಯಿತು ಎನ್ನುವುದರ ಬಗ್ಗೆ ಒಬ್ಬೊಬ್ಬರದ್ದೂ ಒಂದೊಂದು ಆಯಾಮದ ಕಥೆಯಿರುತ್ತದೆ. ಕೆಲವರಿಗೆ ಅಂದು ಆಡಿದ ಮಾತುಗಳೇ ಭಿನ್ನವಾಗಿ ನೆನಪಿರುತ್ತವೆ. ಕೆಲವರಂತೂ ಘಟನೆ ನಡೆದದ್ದು ಬೇರೆಯದ್ದೇ ಜಾಗದಲ್ಲಿ ಎಂದೇ ಹೇಳುತ್ತಾರೆ. ಸಮಯ ಕಳೆದಂತೆ, ಯಾವುದು ಸತ್ಯ ಮತ್ತು ಯಾವುದು ಸತ್ಯವಲ್ಲ ಎನ್ನುವ ವ್ಯತ್ಯಾಸದ ರೇಖೆಯು ಮಸುಕಾಗಲಾರಂಭಿಸುತ್ತಾ ಹೋಗುತ್ತದೆ.

ಅದೇಕೆ ನಮ್ಮ ಮನಸ್ಸು ಒಂದು ಘಟನೆಯನ್ನು ಮಸುಕಾಗಿಸುತ್ತದೆ? ಅಥವಾ ಘಟನೆಯ ಕಥೆಯನ್ನೇ ಬದಲಿಸಿಬಿಡುತ್ತದೆ? ಯಾಕೆಂದರೆ, ಯಾರಿಗೂ ಇನ್ನೊಬ್ಬರ ದೃಷ್ಟಿಯಲ್ಲಿ ಕೆಟ್ಟವರಾಗುವುದು ಬೇಕಿರುವುದಿಲ್ಲ. ಹಾಗಾಗಿ, ನಮ್ಮನ್ನು ಒಳ್ಳೆಯವರೆಂದು ತೋರಿಸುವ ರೀತಿಯಲ್ಲಿ ಇಡೀ ಚಿತ್ರಣವನ್ನು ನಮ್ಮ ಮನಸ್ಸು ಪುನರ್‌ ಸೃಷ್ಟಿಸುತ್ತದೆ. ಒಂದೇ ಸುಳ್ಳನ್ನು ಹಲವು ಬಾರಿ ಹೇಳಿಕೊಂಡ ನಂತರ, ಅದೇ ಭ್ರಮೆಯಾಗುತ್ತದೆ. ಆ ಭ್ರಮೆಯೇ ವ್ಯಕ್ತಿಯೊಳಗಿನ ಸತ್ಯವಾಗಿಬಿಡುತ್ತದೆ. ತಾವು ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಳ್ಳಲು ಎಲ್ಲರಿಗೂ ಆತ್ಮಾಭಿಮಾನ ಅಡ್ಡಿಯಾಗುವುದು ಸಹಜ. ಹೀಗಾಗಿ, ಇನ್ನೊಬ್ಬರೆದುರು ನಮ್ಮನ್ನು ನಾವು ಒಳ್ಳೆಯವರೆಂದು ಬಿಂಬಿಸಿಕೊಳ್ಳುವ ಭರದಲ್ಲಿ ಮುಖವಾಡ ಧರಿಸಿಬಿಡುತ್ತೇವೆ. ಹೀಗೆ, ಕಾಲಾಂತರದಲ್ಲಿ ಅನೇಕ ಮುಖವಾಡಗಳನ್ನು ತೊಡುತ್ತಾ, ನಮ್ಮ ನಿಜವಾದ ಮುಖವೇ ಮುಚ್ಚಿಹೋಗಿಬಿಡುತ್ತದೆ. ಈ ಮುಖವಾಡಗಳನ್ನು ಕಳಚುತ್ತಾ “ನಾವು ನಾವಾಗುವ’ ಪ್ರಕ್ರಿಯೆಯನ್ನು ಆರಂಭಿಸಬೇಕು. ಈ ಕಾರಣಕ್ಕಾಗಿಯೇ ಜನರು ರಿಗ್ರೆಶನ್‌ ಥೆರಪಿ ಎಂಬ ಮನೋಚಿಕಿತ್ಸೆ ಪಡೆಯುತ್ತಾ(ಇದನ್ನು ನಾನು ತುಂಬಾ ಶಿಫಾರಸು ಮಾಡುತ್ತೇನೆ), ಪದರಪದರಗಳ ಮುಖವಾಡವನ್ನು ಹರಿದುಹಾಕುತ್ತಾ ಹೋಗುವುದು ಬೆಚ್ಚಿಬೀಳಿಸುವ ಸಂಗತಿಯೂ ಹೌದು ಮತ್ತು ಆಸಕ್ತಿದಾಯಕ ಸಂಗತಿಯೂ ಹೌದು. ಏಕೆಂದರೆ, ಆಗ ಎಲ್ಲರಿಗೂ ನಿಮ್ಮ ನಿಜವಾದ ಪರಿಚಯವಾಗಲಾರಂಭಿಸುತ್ತದೆ.

ವೈಯಕ್ತಿಕ ಸ್ವಾತಂತ್ರ್ಯದ ಹಾದಿಯಲ್ಲಿ ಚಲಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ, ಯಾರು ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೋ, ಅವರು ನಿಜಕ್ಕೂ ಅದ್ಭುತ ವ್ಯಕ್ತಿಗಳು. ಹೌದು, ನಾವೆಲ್ಲರೂ ಒಂದು ರೀತಿಯ ಅಪಾಯಕಾರಿ ವರ್ತನೆಗಳಿಗೆ ಅಂಟಿಕೊಂಡುಬಿಟ್ಟಿರುತ್ತೇವೆ. ಖಂಡಿತ, ಆ ರೀತಿಯ ಗುಣ ಒಂದು ಸಮಯದಲ್ಲಿ ನಮಗೆ ಸಹಾಯವನ್ನೇನೋ ಮಾಡಿರುತ್ತದೆ. ಆದರೆ, ಹಿಂದೆ ಸಹಾಯ ಮಾಡಿತು ಎಂಬ ಕಾರಣಕ್ಕೆ ಈಗ ಅಪಾಯಕಾರಿಯಾಗಿ ಪರಿಣಮಿಸಿದ್ದರೂ, ಅದಕ್ಕೆ ಅಂಟಿಕೊಳ್ಳಬೇಕೇನು? ನಾನು ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ತಾಟಸ್ಥ್ಯ ಮತ್ತು ಭ್ರಮೆ ನಮ್ಮನ್ನು ಜೀವನದಲ್ಲಿ ಎತ್ತರಕ್ಕೇರಲು ಬಿಡುವುದಿಲ್ಲ.

ಅನೇಕರು, “ತಾವು ಭ್ರಮೆಯಲ್ಲಿಲ್ಲ, ಮುಖವಾಡ ಧರಿಸಿಲ್ಲ, ತಾವು ಸರಿಯಾಗಿಯೇ ಇದ್ದೇವೆ’ ಎಂದು ವಾದಿಸುತ್ತಾರೆ. ಅವರು ತಾವು ಬದಲಾಗಬಹುದು ಎಂಬ ಸಾಧ್ಯತೆಯನ್ನೇ ತಳ್ಳಿಹಾಕುತ್ತಾ, ಅದೇ ಹಳೆಯ ಗುಣಗಳನ್ನೇ, ಅವೇ ಹಳೆಯ ಸೂತ್ರಗಳನ್ನೇ ಪುನರಾವರ್ತಿಸುತ್ತಾ, ಫ‌ಲಿತಾಂಶ ಬದಲಾಗುತ್ತದೆ ಎಂದು ಕಾಯುತ್ತಲೇ ಇದ್ದುಬಿಡುತ್ತಾರೆ. ಈ ಮುಖವಾಡಗಳು ನಿಮಗೆ ಭಾರವಾಗಿ ಪರಿಣಮಿಸುತ್ತಾ, ನಿಮ್ಮ ಶಕ್ತಿಯನ್ನೆಲ್ಲ ನುಂಗಿಹಾಕುತ್ತಿಲ್ಲವೇ? ಈ ನಿರ್ಜೀವ ಮುಖವಾಡಗಳನ್ನು ಕಿತ್ತೆಸೆಯಲು ನೀವು ಬಯಸುತ್ತಿಲ್ಲವೇ?

ಸಾಧನೆ ಮತ್ತು ಅಹಂಕಾರ
“”ನಿಮ್ಮನ್ನು ಅಹಂಕಾರಿಯಾಗಿಸುವ “ಸಾಧನೆ’ಗಿಂತ, ನಿಮ್ಮನ್ನು ವಿನಮ್ರರಾಗಿಸುವ “ವೈಫ‌ಲ್ಯ’ ಒಳ್ಳೆಯದು.”  ಮೇಲಿನ ಹಿತವಚನ ನನಗೇಕೆ ಇಷ್ಟವೆಂದರೆ, ಇದು ಕೇವಲ ನಮ್ಮ ಸಂಬಂಧಗಳಿಗಷ್ಟೇ ಅಲ್ಲದೇ, ದೇಶದ ಪ್ರಸಕ್ತ ರಾಜಕೀಯ ವಾತಾವರಣಕ್ಕೂ ಸರಿಹೊಂದುತ್ತದೆ. ಸಂಬಂಧಗಳಿರಲಿ ಅಥವಾ ವೃತ್ತಿಪರ ಅಧಿಕಾರವಿರಲಿ…ಹಿಂದೆ ನೀವೇನೋ ಉತ್ತಮ ನಿರ್ಧಾರ ಕೈಗೊಂಡಿದ್ದಿರಿ, ಸಾಧನೆ ಮಾಡಿದ್ದೀರಿ ಎಂಬ ಕಾರಣಕ್ಕಾಗಿ, ಶ್ರೇಷ್ಠತೆಯ ವ್ಯಸನದಲ್ಲಿ ಕೊಚ್ಚಿಹೋಗಬಾರದಲ್ಲವೇ? ಸತ್ಯವೇನೆಂದರೆ, ನಾವೆಲ್ಲರೂ ಮನುಷ್ಯರು. ಹೀಗಾಗಿ ತಪ್ಪು ಮಾಡುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ, ಬಹುಮುಖ್ಯ ಅಂಶವೆಂದರೆ, ತಪ್ಪುಗಳು ಆದಾಗ ಅದನ್ನು ಒಪ್ಪಿಕೊಳ್ಳುವುದು ಮುಖ್ಯವೇ ಹೊರತು, ನಿರಾಕರಣೆಯಲ್ಲ. ನಮ್ಮ ಬೆಳವಣಿಗೆಗೆ ನಿರಾಕರಣೆಯು ಬಹುದೊಡ್ಡ ಅಡ್ಡಿ. ಪ್ರತಿ ಯಶಸ್ಸೂ ಕೂಡ ತನ್ನೊಂದಿಗೆ ಕೃತಜ್ಞತಾ ಭಾವವನ್ನು ಹೊತ್ತು ತರುತ್ತದೆ. ಆದರೆ ಒಮ್ಮೊಮ್ಮೆ ಇದು ಅಹಂಕಾರಕ್ಕೂ ಕಾರಣವಾಗುತ್ತದೆ. “”ನಾನು ಮಾಡಿದ್ದೆಲ್ಲವೂ ವರ್ಕ್‌ ಆಗುತ್ತದೆ” ಎಂಬ ಭಾವನೆ ಬೇರೂರಲು ಕಾರಣವಾಗಿಬಿಡುತ್ತದೆ. ಯಾವತ್ತು ನೀವು ಅಹಂಕಾರಿಗಳಾಗುತ್ತೀರೋ, ನಿಮ್ಮ ಯಶಸ್ಸಿಗೆ ಕಾರಣರಾದ ವ್ಯಕ್ತಿಗಳನ್ನು ಅಂಶಗಳನ್ನು ಕಡೆಗಣಿಸಲಾರಂಭಿಸುತ್ತೀರೋ, ನಿಮ್ಮಲ್ಲೇ ನೀವು ಮುಳುಗಿಹೋಗುತ್ತೀರೋ ಆಗ ನಿಮಗೆ ಪೋಷಕವಾಗಿ ನಿಂತ ಜನರು ಮತ್ತು ಪರಿಸ್ಥಿತಿಗಳು ದೂರವಾಗಿಬಿಡುತ್ತವೆ. ಯಶಸ್ಸು ನಿಮ್ಮ ತಲೆತಿರುಗಿಸದಂತೆ ಎಚ್ಚರಿಕೆ ವಹಿಸಿ.

ಜೀವನದಲ್ಲಿ ಕೆಟ್ಟ ಅನುಭವಗಳಾಗುವುದು ಸಹಜವೇ. ಆದರೆ ಅದಕ್ಕೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ,ಆ ಅನುಭವಗಳು ನಿಮ್ಮನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿವೆಯೇ, ಎನ್ನುವುದು ಮುಖ್ಯ.

ಕಾಲಾಂತರದಲ್ಲಿ ಅನೇಕ ಮುಖವಾಡಗಳನ್ನು ತೊಡುತ್ತಾ, ನಮ್ಮ ನಿಜವಾದ ಮುಖವೇ ಮುಚ್ಚಿಹೋಗಿಬಿಡುತ್ತದೆ. ಮುಖವಾಡಗಳನ್ನು ಕಳಚುತ್ತಾ “ನಾವು ನಾವಾಗುವ’ ಪ್ರಕ್ರಿಯೆಯನ್ನು ಆರಂಭಿಸಬೇಕು.

(ಕೃಪೆ-ಟಿಒಐ)
ಪೂಜಾ ಬೇಡಿ ಲೇಖಕಿ, ನಟಿ

Advertisement

Udayavani is now on Telegram. Click here to join our channel and stay updated with the latest news.

Next