Advertisement

ಸಿಇಟಿ ಕೋಟಾ ಸೀಟು ಆಕಾಂಕ್ಷಿಗಳಿಗೆ ನಿರಾಸೆ

12:42 AM Oct 06, 2022 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌ ಸೇರಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈಗಾಗಲೇ ವಿಳಂಬ ಮಾಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಈಗ ಸೀಟು ಹಂಚಿಕೆ ಯಲ್ಲಿಯೂ ವಿಳಂಬ ನೀತಿ ಅನುಸರಿಸುವ ಮೂಲಕ ಬಡ ವಿದ್ಯಾರ್ಥಿಗಳ ಸರಕಾರಿ ಕೋಟ ಸೀಟು ದೊರೆಯದಂತೆಯೂ ನಿರಾಸೆ ಮೂಡಿಸಿದೆ.

Advertisement

ಸುಮಾರು 10 ದಿನಗಳ ಮೊದಲೇ ಕಾಮೆಡ್‌-ಕೆ ಸೀಟುಗಳ ಹಂಚಿಕೆ ವೇಳಾಪಟ್ಟಿಯನ್ನು ಕಾಮೆಡ್‌-ಕೆ ಪ್ರಕಟಿಸಿದ್ದು ಇದಕ್ಕೂ ಮೊದಲೇ ಸಿಇಟಿ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸಬಹುದಿತ್ತು. ಆದರೂ ಕಾಮೆಡ್‌-ಕೆ ಬಳಿಕ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸುತ್ತಿದೆ.

ಅ. 7ರಂದು ಕಾಮೆಡ್‌-ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಫ‌ಲಿತಾಂಶ ಪ್ರಕಟವಾಗಲಿದ್ದು, ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅ.13 ಕೊನೆಯ ದಿನವಾಗಿದೆ. ಆದರೆ, ಸಿಇಟಿ ಸೀಟು ಹಂಚಿಕೆ ಫ‌ಲಿತಾಂಶವು ಅ.17ರಂದು ಪ್ರಕಟವಾಗಲಿದೆ. ಇದರಿಂದ ವಿದ್ಯಾರ್ಥಿಗಳು ಮೊದಲ ಸುತ್ತಿನಲ್ಲಿ ಸಿಇಟಿ ಸೀಟುಗಳನ್ನು ಪಡೆಯಲು ಸಮಸ್ಯೆಯಾಗಲಿದೆ. ಒಂದು ವೇಳೆ ಸೀಟನ್ನು ನಿರಾಕರಿಸಿದರೆ, ಮತ್ತೆ ತಾವು ಇಚ್ಛಿಸಿದ ಕಾಲೇಜುಗಳಲ್ಲಿ ಸೀಟು ಸಿಗದಿದ್ದರೆ ಹೇಗೆ ಎಂಬ ಆತಂಕ ಕೂಡ ವಿದ್ಯಾರ್ಥಿಗಳಲ್ಲಿ ನೆಲೆಸಿದೆ.

ಕಾಮೆಡ್‌-ಕೆಗಿಂತ ಮೊದಲೇ ಸಿಇಟಿ ಕೌನ್ಸೆಲಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಿದ್ದರೆ, ಸಿಇಟಿ ಮೊದಲ ಸುತ್ತಿನಲ್ಲಿ ಸೀಟು ದೊರೆಯದಿದ್ದ ವಿದ್ಯಾರ್ಥಿಗಳು ಕಾಮೆಡ್‌-ಕೆಯಲ್ಲಿ ಸೀಟು ಪಡೆಯುತ್ತಿದ್ದರು. ಸರಕಾರಿ ಕೋಟ ಸೀಟು ಪಡೆಯುತ್ತಿದ್ದರಿಂದ ವಿದ್ಯಾರ್ಥಿಗಳಿಗೆ ಶುಲ್ಕ ಕೂಡ ಕಡಿಮೆಯಾಗುತ್ತಿತ್ತು. ಸರಕಾರಿ ಕೋಟಾದಲ್ಲಿ ಖಾಸಗಿ ಕಾಲೇಜುಗಳಲ್ಲಿ 91,878 ರೂ.ಗಳು ಶುಲ್ಕವಿದೆ. ಅದೇ ಕಾಮೆಡ್‌-ಕೆ ನಲ್ಲಿ 1,58,123 ರೂ. ಶುಲ್ಕವಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಲ್ಲಿ ಸಿಗದಿದ್ದರೆ, ಕನಿಷ್ಠ ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಕೋಟಾದಡಿ ಓದಬಹುದು ಎಂಬ ಆಸೆಯನ್ನಿಟ್ಟುಕೊಂಡವರಿಗೆ ಸರಕಾರ ತಣ್ಣೀರೆರಚಿದೆ ಎಂದು ಸಿಇಟಿ ಸೀಟು ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೀಟು ಪಡೆಯಲು ಏನು ಮಾಡಬಹುದು?
ಸಿಇಟಿ ನಲ್ಲಿ ಸೀಟು ಸಿಗಬಹುದು ಎಂಬ ಆತ್ಮವಿಶ್ವಾಸವಿರುವ ವಿದ್ಯಾರ್ಥಿಗಳು ಕಾಮೆಡ್‌-ಕೆ ನಲ್ಲಿ ಮೊದಲ ಸುತ್ತಿನಲ್ಲಿ ಸೀಟು ಪಡೆದು ಚಾಯ್ಸ-2 ಆಯ್ಕೆ ಮಾಡಿಕೊಂಡು ಸೀಟು ಉಳಿಸಿಕೊಳ್ಳಬಹುದು. ಕೆಇಎ ಸಿಇಟಿಯಲ್ಲಿ ಮೊದಲ ಸುತ್ತಿನಲ್ಲಿ ಸೀಟು ದೊರೆತರೆ, ಕಾಮೆಡ್‌-ಕೆ 2ನೇ ಸುತ್ತಿನಲ್ಲಿ ಸೀಟು ವಾಪಸ್‌ ಮಾಡಬಹುದು. ಆದರೆ, ವಿದ್ಯಾರ್ಥಿಗಳು ತಮ್ಮ ಚಾಯ್ಸ ಆಯ್ಕೆಯಲ್ಲಿ ಗಮನ ಹರಿಸಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಕಾಮೆಡ್‌-ಕೆ ಮೂಲಗಳು ತಿಳಿಸಿವೆ.

Advertisement

ಅ. 25ರೊಳಗೆ ಎಂಜಿನಿಯರಿಂಗ್‌ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಎಐಸಿಟಿಇ ಸಮಯ ನೀಡಿದೆ. ಹೀಗಾಗಿ, ಆದಷ್ಟು ಬೇಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತಿದೆ. ಅ.25ರೊಳಗೆ ಇನ್ನೂ ಎರಡು ಸುತ್ತಿನ ಸೀಟು ಹಂಚೆಕ ಮುಗಿಸಬೇಕಿದೆ. ಆದ್ದರಿಂದ ಸಮಯ ನೀಡಲು ಸಾಧ್ಯವಿಲ್ಲ.
– ಎಸ್‌. ಕುಮಾರ್‌, ಕಾರ್ಯನಿರ್ವಾಹಕ ನಿರ್ದೇಶಕ, ಕಾಮೆಡ್‌-ಕೆ

ಪ್ರಕರಣ ನ್ಯಾಯಾಲಯದಲ್ಲಿದ್ದರಿಂದ ವಿಳಂಬವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗನೇ ಪ್ರಕ್ರಿಯೆ ನಡೆಸಲಾಗುತ್ತಿದೆ. ಮೊದಲ ಸುತ್ತಿನಲ್ಲಿ ಸೀಟು ದೊರೆಯಲಿದೆ ಎಂಬ ಆತ್ಮವಿಶ್ವಾಸವಿರುವ ವಿದ್ಯಾರ್ಥಿಗಳು ಸಿಇಟಿ ಯಲ್ಲಿಯೇ ಸೀಟು ಪಡೆಯುವುದು ಉತ್ತಮ.
– ಎಸ್‌. ರಮ್ಯಾ, ಕಾರ್ಯ ನಿರ್ವಾಹಕ ನಿರ್ದೇಶಕಿ, ಕೆಇಎ

-ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next