ಹೊಸದಿಲ್ಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಕಾಂಗ್ರೆಸ್ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಂತರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿಯವರ ರಕ್ಷಣೆಗೆ ಆಗಮಿಸಿದ್ದಾರೆ.
ರಾಹುಲ್ ಗಾಂಧಿ ಲಂಡನ್ ಭೇಟಿಯ ವೇಳೆ ಮಾಡಿದ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ನಡ್ಡಾ ಒತ್ತಾಯಿಸಿದರು. ನಡ್ಡಾ ಹೇಳಿಕೆಯನ್ನು ಖಂಡಿಸಿದ ಖರ್ಗೆ, ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡುವವರು ದೇಶ ವಿರೋಧಿಗಳೇ ಎಂದು ಪ್ರಶ್ನಿಸಿದರು.
“ಬಿಜೆಪಿಯವರು ಸ್ವತಃ ರಾಷ್ಟ್ರವಿರೋಧಿಗಳು. ಅವರು ಎಂದಿಗೂ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ, ಬ್ರಿಟಿಷರಿಗಾಗಿ ಕೆಲಸ ಮಾಡಿದವರು ಇತರರನ್ನು ದೇಶವಿರೋಧಿಗಳು ಎಂದು ಕರೆಯುತ್ತಿದ್ದಾರೆ. ಅವರು ನಿರುದ್ಯೋಗ ಮತ್ತು ಹಣದುಬ್ಬರದ ಸಮಸ್ಯೆಗಳಿಂದ ವಿಮುಖರಾಗಲು ಈ ರೀತಿ ಮಾಡುತ್ತಿದ್ದಾರೆ” ಎಂದು ಅವರು ಸುದ್ದಿ ಸಂಸ್ಥೆ ಎಎನ್ಐ ಗೆ ಹೇಳಿದರು.
ಇದನ್ನೂ ಓದಿ:ಬಿಎಸ್ವೈ- ರಾಘವೇಂದ್ರಗೆ ಕೊಟ್ಟ ಪ್ರೀತಿಯನ್ನು ವಿಜಯೇಂದ್ರಗೂ ತೋರಿಸಿ: ಸಿಎಂ ಬೊಮ್ಮಾಯಿ
“ಜೆಪಿ ನಡ್ಡಾ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ, ಕ್ಷಮೆಯಾಚಿಸುವುದರಲ್ಲಿ ಅರ್ಥವಿಲ್ಲ, ನಾವು ಸಂಸತ್ತಿನಲ್ಲಿ ಇದಕ್ಕೆ ಬಲವಾದ ಉತ್ತರವನ್ನು ನೀಡುತ್ತೇವೆ. ಈ ಬಗ್ಗೆ ರಾಹುಲ್ ಗಾಂಧಿ ಅವರೇ ಉತ್ತರಿಸುತ್ತಾರೆ, ಅದಕ್ಕಾಗಿಯೇ ಬಿಜೆಪಿ ಹೆದರುತ್ತಾರೆ. ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿ,’’ ಎಂದು ಖರ್ಗೆ ಹೇಳಿದರು.