ನವದೆಹಲಿ:ಕೋವಿಡ್ ನ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ನಂತರ ಭಾರತದಲ್ಲಿ ಕೋವಿಡ್ ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಸೋಂಕನ್ನು ನಿಗ್ರಹಿಸಬಲ್ಲದು ಎಂಬ ಜಿಜ್ಞಾಸೆ ನಡೆಯತೊಡಗಿದೆ. ಈವರೆಗೆ ಪತ್ತೆಯಾದ ವೈರಸ್ ಗಳಲ್ಲಿ ಒಮಿಕ್ರಾನ್ ಕ್ಷಿಪ್ರವಾಗಿ ಹರಡಬಲ್ಲ ರೂಪಾಂತರಿ ತಳಿಯಾಗಿದೆ.
ಇದನ್ನೂ ಓದಿ:‘ಲಡ್ಡು ಬಂದು ಬಾಯಿಗೆ ಬಿತ್ತಾ…’ ಅವತಾರ್ ಪುರುಷ ಹಾಡು
ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸುವುದು ಮತ್ತು ತ್ವರಿತವಾಗಿ ಪತ್ತೆಹಚ್ಚಲು ಎಸ್.ಜೀನ್ (S gene) ಪಿಸಿ ಆರ್ ಟೆಸ್ಟಿಂಗ್ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ತಜ್ಞರು ಸಲಹೆ ನೀಡಿರುವುದಾಗಿ ವರದಿ ಹೇಳಿದೆ.
ಎಸ್ ಜೀನ್ ಪಿಸಿಆರ್ ಟೆಸ್ಟ್ ಮಾಡಿಸಿದರೆ ಒಮಿಕ್ರಾನ್ ವೈರಸ್ ಅನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಆದರೆ ನಮ್ಮಲ್ಲಿರುವ ಪರೀಕ್ಷಾ ಪದ್ಧತಿಯಿಂದ ಒಮಿಕ್ರಾನ್ ವೈರಸ್ ಪತ್ತೆ ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗದಿರಬಹುದು ಎಂದು ವಿಶ್ಲೇಷಿಸಿದ್ದಾರೆ.
ಏತನ್ಮಧ್ಯೆ ಕೋವಿಡ್ ಸೋಂಕನ್ನು ಪತ್ತೆ ಹಚ್ಚಿದ ರೀತಿಯಲ್ಲಿ ಒಮಿಕ್ರಾನ್ ಸೋಂಕನ್ನು ಭಾರತದಲ್ಲಿ ಪತ್ತೆ ಹಚ್ಚಲು ಸಾಧ್ಯವಿದೆಯೇ ಎಂಬ ಬಗ್ಗೆ ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ. ತಜ್ಞರ ಪ್ರಕಾರ, ಪ್ರಸ್ತುತ ಲಭ್ಯವಿರುವ ವೈರಸ್ ಪತ್ತೆ ಹಚ್ಚುವ ಕ್ರಮಗಳಿಂದ ಒಮಿಕ್ರಾನ್ ಕೋವಿಡ್ ಸೋಂಕನ್ನು ಸಮರ್ಪಕವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿನ ಕೋವಿಡ್ ಕಾಲದಲ್ಲಿ ಸಾರ್ಸ್ಸ್ (SARS-CoV-2) ಸೋಂಕು ರೂಪಾಂತರಗೊಂಡಿತ್ತು. ಇದರ ಪರಿಣಾಮ ವಂಶವಾಹಿ ಸೋಂಕುಗಳು ಜನರಲ್ಲಿ ಹರಡುವ ಸಂದರ್ಭದಲ್ಲಿ ಮಾರ್ಪಾಡುಗೊಂಡಿತ್ತು. ಆದರೂ ಆ್ಯಂಟಿಜೆನ್, ಸೆರೋಲಜಿ ಪರೀಕ್ಷಾ ವಿಧಾನಗಳಲ್ಲಿ ಎಲ್ಲಾ ರೂಪಾಂತರಿ ಸೋಂಕಿನಲ್ಲಿ ಬದಲಾವಣೆ ಇದ್ದಿರುವುದು ಕಂಡು ಬಂದಿತ್ತು ಎಂದು ವರದಿ ವಿವರಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಕಳೆದ ವಾರ ನೀಡಿರುವ ಮಾಹಿತಿಯಂತೆ ಹೊಸ ಸೋಂಕನ್ನು ಬಿ.1.1.529 ವೈರಸ್ ಆಗಿದ್ದು, ಇದನ್ನು ಒಮಿಕ್ರಾನ್ (VOC) ಎಂದು ಹೆಸರಿಸಿತ್ತು. ಇದು ಅತ್ಯಂತ ಕ್ಷಿಪ್ರವಾಗಿ ಹರಡಬಲ್ಲ ವೈರಸ್ ಎಂದು ತಿಳಿಸಿದ್ದ ವಿಶ್ವಸಂಸ್ಥೆ, ಒಮಿಕ್ರಾನ್ ಸಾರ್ವತ್ರಿಕ ಆರೋಗ್ಯ ತಪಾಸಣೆ, ಲಸಿಕೆ ಹಾಗೂ ಚಿಕಿತ್ಸೆಯಿಂದ ತಪ್ಪಿಸಿಕೊಳ್ಳುವ ಅಪಾಯ ಹೆಚ್ಚಿದೆ ಎಂದು ಎಚ್ಚರಿಸಿತ್ತು.