ಹೊಸದಿಲ್ಲಿ: ಕೋವಿಡ್ ಒಂದು ವೈರಸ್ ಆಗಿದ್ದು ಅದು ರೂಪಾಂತರಗೊಳ್ಳುತ್ತಲೇ ಇರುತ್ತದೆ. ಭಾರತದಲ್ಲಿ ಇಲ್ಲಿಯವರೆಗೆ 214 ವಿಭಿನ್ನ ರೂಪಾಂತರಗಳು ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಎನ್ ಡಿಟಿವಿ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಇತ್ತೀಚಿನ ಸೋಂಕುಗಳ ಉಲ್ಬಣವನ್ನು ಎದುರಿಸಲು ಸರ್ಕಾರವು ಸಿದ್ಧವಾಗಿದೆ. ಐಸಿಯು ಬೆಡ್ ಗಳು, ಆಮ್ಲಜನಕ ಪೂರೈಕೆ ಮತ್ತು ಇತರ ನಿರ್ಣಾಯಕ ಆರೈಕೆ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ಅವರು ಹೇಳಿದರು.
ಕೋವಿಡ್ ಹೇಗೆ ವರ್ತಿಸುತ್ತದೆ ಎಂದು ಊಹಿಸಲು ಅಸಾಧ್ಯ, ಆದರೆ ಈಗ ಉಲ್ಬಣಗೊಳ್ಳುತ್ತಿರುವ ಪ್ರಕರಣಗಳು ದೊಡ್ಡ ಹಾನಿ ಉಂಟುಮಾಡುವಷ್ಟು ಅಪಾಯಕಾರಿ ಅಲ್ಲ ಎಂದು ಸಚಿವರು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, “ಕೋವಿಡ್ ಹೊಂದಿರುವ ಯುವಜನರಲ್ಲಿ ಇತ್ತೀಚಿನ ಹೃದಯಾಘಾತಗಳ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಸರ್ಕಾರವು ಸಂಶೋಧನೆ ಮಾಡುತ್ತಿದೆ, ಎರಡು-ಮೂರು ತಿಂಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ” ಎಂದು ಅವರು ಹೇಳಿದರು.
“ನಾವು ಹಲವಾರು ಯುವ ಕಲಾವಿದರು, ಕ್ರೀಡಾಪಟುಗಳನ್ನು ನೋಡಿದ್ದೇವೆ … ಅವರು ಪ್ರದರ್ಶನ ಮಾಡುವಾಗ ವೇದಿಕೆಯ ಮೇಲೆ ಅಸುನೀಗಿದ್ದಾರೆ. ನಾವೆಲ್ಲರೂ ಅದನ್ನು ನೋಡಿದ್ದೇವೆ, ಹಲವಾರು ಸ್ಥಳಗಳಿಂದ ವರದಿಗಳು ಬರಲಾರಂಭಿಸಿದವು. ನಾವು ತನಿಖೆ ಮಾಡಬೇಕಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ:GI ಕ್ಲಬ್ ಸೇರಿದ ಜನಪ್ರಿಯ ಬನಾರಸಿ ಪಾನ್, ಲಾಂಗ್ಡಾ ಮಾವು: ಜಿಐ ಟ್ಯಾಗ್ ನ ವಿಶೇಷತೆ ಏನು?
ಕೋವಿಡ್ ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯ ಬಗ್ಗೆ ಮಾತನಾಡಿದ ಆರೋಗ್ಯ ಸಚಿವರು, ‘ಎಚ್ಚರಿಕೆಯ ಅಗತ್ಯವಿದೆ’ ಎಂದು ಹೇಳಿದರು. ಕಳೆದ ಕೋವಿಡ್ ರೂಪಾಂತರವು Omicron ನ BF.7 ಉಪ- ರೂಪಾಂತರವು ಮತ್ತು ಈಗಿರುವ XBB1.16 ಉಪ-ರೂಪಾಂತರವು ಸೋಂಕುಗಳ ಉಲ್ಬಣವನ್ನು ಉಂಟು ಮಾಡುತ್ತಿದೆ. ಆದರೆ ಈ ಉಪ-ರೂಪಾಂತರಿಗಳು ತುಂಬಾ ಅಪಾಯಕಾರಿ ಅಲ್ಲ ಎಂದು ಅವರು ಹೇಳಿದರು,