Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಹಳದಿ ಎಲೆ ರೋಗಬಾಧಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಗಳ ಅಂಕಿಅಂಶಗಳನ್ನು ನಿಖರ ಅಧ್ಯಯನ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ಜನವರಿಯಲ್ಲಿ ಸಮೀಕ್ಷೆ ಆರಂಭಿಸಲಾಗಿತ್ತು.
ಸಂಪಾಜೆ, ಅರಂತೋಡು, ಆಲೆಟ್ಟಿ, ಉಬರಡ್ಕ, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಕೊಡಿಯಾಲ, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ತಂಡ ರಚಿಸಲಾಗಿತ್ತು. 13,993 ಸರ್ವೆ ನಂಬರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಒಟ್ಟು 7,048 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಹಳದಿ ರೋಗ ಕಂಡುಬಂದಿದೆ. 1,043.38 ಹೆಕ್ಟೇರ್‌ಗಳಲ್ಲಿ ಸರಿಸುಮಾರು 14,29,440 ಅಡಿಕೆ ಮರಗಳು ರೋಗಬಾಧಿತ ಎಂದು ಪರಿಗಣಿಸಲಾಗಿದೆ. ರೈತರ ಸಭೆ
ಅತ್ಯಧಿಕ ಪ್ರಮಾಣದಲ್ಲಿ ಹಳದಿ ರೋಗಕ್ಕೆ ತುತ್ತಾಗಿ ಅಡಿಕೆ ತೋಟ ಕಳೆದುಕೊಂಡಿರುವ ಸುಳ್ಯ ತಾಲೂಕಿನಲ್ಲಿ ಅದರ ತೀವ್ರತೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಔಷಧ ಇಲ್ಲದ ಕಾರಣ ಅಡಿಕೆ ಕೃಷಿಯೇ ನಾಶದಂಚಿಗೆ ತಲುಪಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂಬ ಉದ್ದೇಶದಿಂದ 2019ರ ನ. 2ರಂದು ಅರಂತೋಡಿನಲ್ಲಿ ಶಾಸಕ ಎಸ್. ಅಂಗಾರ ಉಪಸ್ಥಿತಿಯಲ್ಲಿ ದ.ಕ. ಜಿ.ಪಂ. ಸಿಇಒ ಡಾ| ಆರ್. ಸೆಲ್ವಮಣಿ ನೇತೃತ್ವದಲ್ಲಿ ರೈತರ ಸಭೆ ನಡೆದಿತ್ತು. ಸಮಗ್ರ ಸಮೀಕ್ಷೆ ನಡೆಸಿ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆ ಬಗ್ಗೆ ನಿಖರ ಅಂಕಿಅಂಶ ಪಡೆದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು.
Related Articles
ಕಂದಾಯ, ಪಂ.ರಾಜ್ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಪ್ರತೀ 700 ಸರ್ವೆ ನಂಬರ್ ವ್ಯಾಪ್ತಿಗೆ ಓರ್ವರಂತೆ ಸಮೀಕ್ಷೆ ನಡೆಸಿ ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ವರದಿಗಳನ್ನು ತಾಲೂಕು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಿ, ಅಲ್ಲಿಂದ ಜಿ.ಪಂ. ಮೂಲಕ ಸರಕಾರಕ್ಕೆ ಕಳುಹಿಸಲಾಗುತ್ತದೆ.
Advertisement
ನಾಲ್ವರ ನಿರಾಸಕ್ತಿ!ಸಮೀಕ್ಷಾ ತಂಡದ ಪ್ರತಿಯೊಬ್ಬರಿಗೆ ನಿರ್ದಿಷ್ಟ ಪ್ರದೇಶ ನೀಡಲಾಗಿತ್ತು. ಈ ಪೈಕಿ ಕೊಡಿಯಾಲ, ಸಂಪಾಜೆಯ ತಲಾ ಓರ್ವರು ಮತ್ತು ಆಲೆಟ್ಟಿಯ ಇಬ್ಬರು ತಮ್ಮ ವ್ಯಾಪ್ತಿಯ ಸಮೀಕ್ಷಾ ವರದಿ ನೀಡಿಲ್ಲ. ಕಳೆದ ಡಿಸೆಂಬರ್ ಕೊನೆಯ ವಾರದಲ್ಲಿ ಸಮೀಕ್ಷೆ ಆರಂಭಿಸಿ 15 ದಿನಗಳಲ್ಲಿ ವರದಿ ಸಲ್ಲಿಸಲು ಆದೇಶ ನೀಡಲಾಗಿದ್ದು, ಐದು ತಿಂಗಳಾಗುತ್ತ ಬಂದರೂ ಈ ನಾಲ್ವರು ನಿರಾಸಕ್ತಿ ತೋರಿದ್ದಾರೆ. ನಿರ್ದಿಷ್ಟ ಸರ್ವೆ ನಂಬರ್ ವ್ಯಾಪ್ತಿಗೆ ಒಬ್ಬರಂತೆ ಆಯ್ಕೆ ಮಾಡಿ ಆಯ್ದ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ನಾಲ್ವರನ್ನು ಹೊರತುಪಡಿಸಿ ಉಳಿದವರು ವರದಿ ಸಲ್ಲಿಸಿದ್ದಾರೆ.
-ಸುಹಾನ, ತೋಟಗಾರಿಕೆ ಅಧಿಕಾರಿ, ಸುಳ್ಯ