ವಿಜಯಪುರ: ಪ್ರಜ್ವಲ್ ಲೈಂಗಿಕ ಹಗರಣದ ಅಶ್ಲೀಲ ವಿಡಿಯೋ ಬಿಡುಗಡೆಯಿಂದ ಮೈತ್ರಿ ಪಕ್ಷವಾಗಿ ಬಿಜೆಪಿ ಪಕ್ಷಕ್ಕೂ ಮುಜುಗರವಾಗುತ್ತಿರುವುದು ಸತ್ಯ. ಆದರೆ ಮಹಿಳೆಯರ ಸೂಕ್ಷ್ಮ ವಿಷಯದ ಈ ಪ್ರಕರಣವನ್ನೂ ಕಾಂಗ್ರೆಸ್ ರಾಜಕೀಕರಣ ಮಾಡುತ್ತಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಟೀಕಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಮಾತ್ರವಲ್ಲ ತಪ್ಪು ಮಾಡಿದ ಯಾರಿಗೇ ಆಗಲಿ ಶಿಕ್ಷೆಯಾಗಲೇ ಬೇಕು. ಸರ್ಕಾರ ಸದರಿ ಪ್ರಕರಣಕದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದರು.
ರಾಜ್ಯ ಸರ್ಕಾರದ ಆಡಳಿತ ವಿರೋಧಿ ಅಲೆಯ ಕಾರಣದಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ರಾಜ್ಯದಲ್ಲಿ ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ 11 ಬಿಜೆಪಿ ಹಾಗೂ ಮೈತ್ರಿ ಪಕ್ಷವಾದ ಜೆಡಿಎಸ್ 3 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಎರಡನೇ ಹಂತದ ಕ್ಷೇತ್ರಗಳಲ್ಲೂ ಬಿಜೆಪಿ ಮುಂದಿದೆ. ಇದನ್ನು ಸಹಿಸಲಾಗದ ಕಾಂಗ್ರೆಸ್ ಅಭ್ಯರ್ಥಿ ಆಧಾರಿತ ಚುನಾವಣೆ ಪ್ರಚಾರ ಮಾಡದೆ ಅಶ್ಲೀಲ ವಿಡಿಯೋ ಪ್ರಕರಣವನ್ನು ರಾಜಕೀಕರಣ ಗೊಳಿಸುತ್ತಿದೆ ಎಂದು ಟೀಕಿಸಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿ ದೂರದ ಕೊಲ್ಕತ್ತಾ ನಗರದಲ್ಲಿ ಪತ್ತೆಯಾಗಿದ್ದಾನೆ. ಈ ಕೃತ್ಯದ ಹಿಂದೆ ಜಿಹಾದ್ ಕೈವಾಡದ ಶಂಕೆಯಿದೆ. ಹುಬ್ಬಳ್ಳಿಯ ನೇಹಾ ಹತ್ಯೆ ಕೃತ್ಯದ ಕೆಲವು ಅಂಶಗಳಿಂದ ಸದರಿ ಘಟನೆ ಹಿಂದೆಯೂ ದೇಶ ವಿರೋಧಿ ಶಕ್ತಿಗಳ ಕೈವಾಡದ ಶಂಕೆ ಇದೆ ಎಂದು ಆರೋಪಿಸಿದರು.
ನಾವು ಅಭಿವೃದ್ಧಿ ಆಧಾರಿತವಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಮೋದಿ ಆಡಳಿತ ಬಂದ ಮೇಲೆ ದೇಶದಲ್ಲಿ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ನಿಗ್ರಹವಾಗಿ ದೇಶದ ಜನರು ಸುರಕ್ಷಿತವಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಯೋಜನಗಳು ಅಭಿವೃದ್ಧಿ ಕಂಡಿವೆ. ಇದೆಲ್ಲ ಮೋದಿ ಸರ್ಕಾರ ಮಾಡಿರುವ ಅಭಿವೃದ್ಧಿ. ಇಂಥ ಅಭಿವೃದ್ಧಿ ವ್ಯವಸ್ಥೆಯಲ್ಲಿ ಉದ್ಯೋಗ ಸೃಷ್ಡಿಯಾಗಿರುವುದು ನಿರುದ್ಯೋಗ ನಿವಾರಣೆಗೆ ಸಹಕಾರಿ ಅಲ್ಲವೇ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.