ಹುಬ್ಬಳ್ಳಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲವೆಂದು ಪಕ್ಷದ ಹೈಕಮಾಂಡ್ ಸ್ಪಷ್ಟಪಡಿಸಿದ್ದು, ಅದರ ಬಗ್ಗೆ ಚರ್ಚೆ ಅಪ್ರಸ್ತುತ. ಶಾಸಕ ಅರವಿಂದ ಬೆಲ್ಲದ ಅವರು ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಹೋಗಿದ್ದಾಗಿ ನನಗೆ ಹೇಳಿದ್ದಾರೆ. ಉಳಿದಂತೆ ಯಾರು ದೆಹಲಿಗೆ ಹೋಗಿದ್ದಾರೆ, ಯಾಕೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಇಲ್ಲ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣಸಿಂಗ್ ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಸಂಕಷ್ಟ ಸ್ಥಿತಿಯಲ್ಲಿ ಯಾರು ಸಹ ನಾಯಕತ್ವ ಬದಲಾವಣೆ ವಿಷಯವಾಗಲಿ, ತಮ್ಮ ಅಸಮಾಧಾನವನ್ನಾಗಲಿ ಬಹಿರಂಗವಾಗಿ ಹೇಳಿಕೆ ನೀಡಬಾರದು. ಸರಕಾರ ಉತ್ತಮ ರೀತಿಯಲ್ಲಿ ಕೋವಿಡ್ ನಿರ್ವಹಣೆ ಮಾಡುತ್ತಿದೆ. ರಾಜ್ಯ ಸಚಿವ ಸಂಪುಟದ ಪುನಾರಚನೆ ಬಗ್ಗೆ ತಿಳಿದಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮುಖ್ಯಮಂತ್ರಿಯವರು ಅದನ್ನು ನಿರ್ಧರಿಸುತ್ತಾರೆ ಎಂದರು.
ಕಾಶ್ಮೀರದಲ್ಲಿ 370 ಕಲಂ ಕುರಿತಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮಾಡಿದ ತುಷ್ಟೀಕರಣ ರಾಜಕಾರಣದಿಂದಲೇ ದೇಶ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ದಿಗ್ವಿಜಯ ಸಿಂಗ್ ಅವರ ಹೇಳಿಕೆ ವೈಯಕ್ತಿಕವೋ ಪಕ್ಷದ ಹೇಳಿಕೆಯೋ ಎಂಬುದನ್ನು ಸೋನಿಯಾ ಗಾಂಧಿ , ರಾಹುಲ್ ಗಾಂಧಿ ಅವರು ಸ್ಪಷ್ಟ ಪಡಿಸಬೇಕೆಂದರು.