ಧಾರವಾಡ: ಉತ್ತರ ಕರ್ನಾಟಕದ ಭಾಗದಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆ ಕುರಿತಂತೆ ಬ್ರಿಟಿಷ್ ಅ ಧಿಕಾರಿಗಳಿಗೆ ಕಾಲೇಜು ಸ್ಥಾಪನೆಯ ಬಗ್ಗೆ ಮಹತ್ವ ತಿಳಿಸಿ ಕೊಡುವಲ್ಲಿ ರಾವ್ ಬಹಾದ್ದೂರ ಅರಟಾಳ ರುದ್ರಗೌಡರು ಮಹತ್ವದ ಪಾತ್ರ ವಹಿಸಿದ್ದರು ಎಂದು ಬೆಳಗಾವಿಯ ಲಿಂಗರಾಜು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ| ಗುರುದೇವಿ ಹುಲೆಪ್ಪನವರಮಠ ಅಭಿಪ್ರಾಯಪಟ್ಟರು.
ಕರ್ನಾಟಕ ಕಾಲೇಜಿನ ಫ್ಯಾರೇನ್ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ 100ನೇ ಸಂಸ್ಥಪನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಮಾಲೆಯಲ್ಲಿ ರಾವ್ ಬಹಾದ್ದೂರ ಅರಟಾಳ ರುದ್ರಗೌಡರ ಕುರಿತು ಮಾತನಾಡಿದರು.
ಕರ್ನಾಟಕ ಕಾಲೇಜು ಸ್ಥಾಪನೆಗೆ ಅರಟಾಳ ರುದ್ರಗೌಡರು ಮತ್ತು ಶ್ರೀನಿವಾರಾಯರು ಸೇರಿ 2.64 ಲಕ್ಷ ರೂಪಾಯಿಗಳನ್ನು ಜನರಿಂದ ವಂತಿಗೆಯನ್ನು ಸಂಗ್ರಹಿಸಿ ಕರ್ನಾಟಕ ಕಾಲೇಜು ಸ್ಥಾಪನೆಗೆ ಅವಿರತ ದೃಢ ಸಂಕಲ್ಪದೊಂದಿಗೆ ದುಡಿದ ಮಹಾತ್ಮರು. ಅರಟಾಳ ರುದ್ರಗೌಡರು ಕೇವಲ ಕರ್ನಾಟಕ ಕಾಲೇಜು ಮಾತ್ರವಲ್ಲದೆ ಈಗಿನ ಕೆ.ಎಲ್.ಇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಅವರು ಪ್ರಮುಖ ಕಾರಣೀಭೂತರು ಎಂದರು.
ಅರಟಾಳ ರುದ್ರಗೌಡರ ಜೀವನ ಸರಳತೆಯಿಂದ ಕೂಡಿದ್ದು, ಇವರ ಬರಹಗಳಿಂದ ಮತ್ತು ಲೇಖನಗಳಿಂದ ಇಂದಿಗೂ ನಮ್ಮ ಮಧ್ಯೆ ಬೌದ್ಧಿಕವಾಗಿ ಇದ್ದಾರೆ. ಆದ್ದರಿಂದ ಅವರ ಜೀವನದ ಸಾಧನೆ ಮತ್ತು ಅವರು ಬದುಕಿದ ರೀತಿ ಇಂದಿನ ಸಮಾಜಕ್ಕೆ ಮಾದರಿಯಾಗಿಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪೊ| ಎಂ.ಎನ್. ಜೋಶಿ ಮಾತನಾಡಿ, ಕರ್ನಾಟಕ ಕಾಲೇಜು ಸ್ಥಾಪನೆಗೆ ಕಾರಣರಾದ ತ್ರಿಮೂರ್ತಿಗಳು ನಮ್ಮೆಲ್ಲರಿಗೂ ಮಾದರಿ.
ಆದ್ದರಿಂದ ಅವರ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಏನನ್ನಾದರೂ ಸಾ ಧಿಸಲು ಸಾಧ್ಯ ಎಂದರು. ಪ್ರಾಚಾರ್ಯರಾದ ಡಾ| ರಾಜೇಶ್ವರಿ ಮಹೇಶ್ವರಯ್ಯ, ಡಾ| ಸಿ.ಎಫ್. ಮೂಲಿಮನಿ ಮತ್ತು ಸಾಹಿತಿ ಹರ್ಷ ಡಂಬಳ ಸೇರಿದಂತೆ ಹಲವರು ಇದ್ದರು. ಡಾ| ಎ.ಎಸ್ ಬೆಲ್ಲದ್ ಸ್ವಾಗತಿಸಿದರು. ಡಾ|ಜಿ.ಎಚ್. ಮಳಿಮಠ ನಿರೂಪಿಸಿದರು. ಡಾ| ಎಂ.ಎನ್. ಮ್ಯಾಗೇರಿ ವಂದಿಸಿದರು.