ಕುಂದಾಪುರ, ಸೆ, 27: ನಿರ್ಮಾಣಗೊಂಡ ಕೇವಲ ಮೂರೇ ವರ್ಷಗಳಲ್ಲಿ ಬಿರುಕು ಬಿಟ್ಟಿರುವ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆಯ ಗುಣಮಟ್ಟ, ಧಾರಣ ಸಾಮರ್ಥ್ಯ ಇತ್ಯಾದಿ ಸಂಗತಿಗಳ ಕುರಿತಂತೆ 5 ತಿಂಗಳ ಹಿಂದೆ ರಾ.ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿದ್ದು, ಆಗ ಸೇತುವೆಯಲ್ಲಿ ಯಾವುದೇ ಲೋಪದೋಷಗಳಿಲ್ಲದೆ, ಸುಸ್ಥಿತಿಯಲ್ಲಿತ್ತು ಎನ್ನುವ ಮಾಹಿತಿ ತಿಳಿದು ಬಂದಿದೆ.
ಅರಾಟೆಯಲ್ಲಿ ಐಆರ್‌ಬಿ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಹೊಸ ಸೇತುವೆ ಮೇಲ್ಭಾಗದಲ್ಲಿ ಶನಿವಾರ ಬಿರುಕು ಕಾಣಿಸಿ ಕೊಂಡಿತ್ತು. ಸದ್ಯ ಸೇತುವೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹಳೆಯ ಸೇತುವೆಯಲ್ಲಿಯೇ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೂಲ ರಚನೆಗೆ ತೊಂದರೆಯಿಲ್ಲ: ಸೇತುವೆ ಮೇಲ್ಭಾಗದಲ್ಲಿ ಮಾತ್ರ ಬಿರುಕು ಕಂಡು ಬಂದಿದೆ. ಸ್ಪಾನ್ ಜಾಯಿಂಟ್‌ನಲ್ಲಿ ಕಂಡು ಬಂದಿರುವ ಬಿರುಕು ಇದಾಗಿದ್ದು, ಅಷ್ಟೇನೂ ಅಪಾಯವಿಲ್ಲ. ಸೇತುವೆಯ ಮೂಲ ರಚನೆಗೆ ಯಾವುದೇ ತೊಂದರೆಯಾಗಿಲ್ಲ ಎನ್ನುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ನಾನು ಕಾಮಗಾರಿಯ ಗುತ್ತಿಗೆ ನಿರ್ವಹಿಸಿರುವ ಐಆರ್‌ಬಿ ಸಂಸ್ಥೆಯ ಎಂಜಿನಿಯರ್‌ಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಸಣ್ಣ ಬಿರುಕು ಕಾಣಿಸಿಕೊಂಡಿದ್ದು, ವಾರದೊಳಗೆ ದುರಸ್ತಿ ಮಾಡುವುದಾಗಿಯೂ ತಿಳಿಸಿದ್ದಾರೆ ಎನ್ನುವುದಾಗಿ ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಐಆರ್‌ಬಿ ಎಂಜಿನಿಯರ್‌ಗಳು ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರು ನೀಡಿರುವ ಹೇಳಿಕೆ ಪ್ರಕಾರ ಸೇತುವೆಯ ಮೇಲ್ಭಾಗದಲ್ಲಷ್ಟೆ ಬಿರುಕು ಕಂಡು ಬಂದಿದೆ. 5 ತಿಂಗಳ ಹಿಂದೆ ಪ್ರಾಧಿಕಾರ ನಡೆಸಿದ ಪರಿಶೀಲನೆ ವೇಳೆ ಸೇತುವೆ ಸುಸ್ಥಿತಿಯಲ್ಲಿತ್ತು.
-ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ