Advertisement

ಹಿಂದುಳಿದ ವರ್ಗಗಳ ಆಶಾಕಿರಣ ಅರಸು

02:25 PM Aug 21, 2017 | Team Udayavani |

ರಾಯಚೂರು: ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ರಾಜ್ಯದ ಪ್ರಥಮ ಮುಖ್ಯಮಂತ್ರಿ
ಡಿ. ದೇವರಾಜ ಅರಸು. ಅವರ ಕೊಡುಗೆಯನ್ನು ಎಂದಿಗೂ ಮರೆಯಲಾಗದು ಎಂದು ಸಂಸದ ಬಿ.ವಿ. ನಾಯಕ
ಬಣ್ಣಿಸಿದರು. ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರವಿವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 102ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗ ಎಂದರೆ ಒಂದು ಜಾತಿ, ಮತಕ್ಕೆ ಸೀಮಿತವಲ್ಲ. ಶೋಷಿತ ಸಮಾಜಗಳಿಗೆ ಸ್ವಾಭಿಮಾನದ ಬದಕು ರೂಪಿಸಿದ ಧೀಮಂತ ನಾಯಕರಾಗಿದ್ದರು. ಇಂದು ಹಿಂದುಳಿದ ವರ್ಗದವರು ಉನ್ನತ ಹುದ್ದೆಗಳಲ್ಲಿರಲು, ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ಡಿ. ದೇವರಾಜ ಅರಸು ಮಹತ್ವದ ಪಾತ್ರ ವಹಿಸಿದ್ದರು ಎಂದರು. ದಲಿತರಾಗಿ ಹೋರಾಡಿದ ಡಾ| ಬಾಬಾಸಾಹೇಬ್‌
ಅಂಬೇಡ್ಕರ್‌ರಂಥ ಮಹನೀಯರ ಸಾಲಿನಲ್ಲಿ ಅರಸು ಕೂಡ ನಿಲ್ಲುತ್ತಾರೆ. ಜೀತ ಪದ್ಧತಿ ಹೋಗಲಾಡಿಸುವ
ನಿಟ್ಟಿನಲ್ಲಿ ಉಳುವವನೇ ಒಡೆಯ ಎಂಬ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸುವ ಮೂಲಕ ಡಿ.ದೇವರಾಜ ಅರಸು
ಭೂಹೀನರ ಆಶಾಕಿರಣವಾದರು. ವಿದ್ಯಾರ್ಥಿಗಳು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪರಮೇಶಪ್ಪ ಮಾತನಾಡಿ, ಹಿಂದುಳಿದ ವರ್ಗಗಳ ಪ್ರಗತಿಗಾಗಿ ಶ್ರಮಿಸಿದ
ದೇವರಾಜ ಅರಸು ಅವರ ಆದರ್ಶಗಳು ಕೇವಲ ಅವರ ಜನ್ಮದಿನಕ್ಕೆ ಸೀಮಿತವಾಗಬಾರದು. ಹಿಂದುಳಿದ ವರ್ಗದ
ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಸೇರಿದಂತೆ ಅನೇಕ ಸೌಕರ್ಯಗಳನ್ನು ಕಲ್ಪಿಸುವಂಥ ಮಹತ್ವದ ಯೋಜನೆಗಳನ್ನು
ಜಾರಿಗೊಳಿಸಿದ್ದರು. ಅವರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು. ಗುಲ್ಬರ್ಗ ವಿವಿ ಕುಲಸಚಿವ ಡಾ| ದಯಾನಂದ ವಿಶೇಷ ಉಪನ್ಯಾಸ ನೀಡಿ, ದೇವರಾಜ ಅರಸು ಅವರಿಗೆ ಅಧಿಕಾರ ಸಿಗದಿದ್ದರೆ, ಇಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಮರೀಚಿಕೆಯಾಗುತ್ತಿತ್ತು. ಉಳುವವನೇ ಒಡೆಯ ಎಂಬ ನಿಯಮ ಪ್ರಥಮ ಬಾರಿಗೆ ಜಾರಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದರಿಂದ ಎಷ್ಟೋ ಬಡ ಕುಟುಂಗಳು ಅಸ್ತಿತ್ವ ಕಂಡುಕೊಂಡವು ಎಂದರು. 12ನೇ ಶತಮಾನದಲ್ಲಿ ಶರಣರ ಹಾಗೂ ಅಂಬೇಡ್ಕರ್‌ ಅವರ ಸಮಾನತೆ ಪರಿಕಲ್ಪನೆಯನ್ನು ದೇವರಾಜ ಅರಸು ಜಾರಿಗೆ ತರುವಲ್ಲಿ ಶ್ರಮಿಸಿದ್ದಾರೆ. ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರು ಎಂದು ವಿವರಿಸಿದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಶಾಂತ ಎನ್‌. ಪ್ರಾಸ್ತಾವಿಕ ಮಾತನಾಡಿದರು. ಎಡಿಸಿ ಗೋವಿಂದರೆಡ್ಡಿ, ನಗರಸಭೆ ಉಪಾಧ್ಯಕ್ಷ ಜಯಣ್ಣ, ಹೆಚ್ಚುವರಿ ಎಸ್‌ಪಿ ಎಸ್‌.ಬಿ. ಪಾಟೀಲ, ಹಿಂದುಳಿದ ವರ್ಗಗಳ ಮುಖಂಡರಾದ ಕೆ.ಶಾಂತಪ್ಪ, ಎಪಿಎಂಸಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಮಡಿವಾಳ ಸಮಾಜದ ಅಧ್ಯಕ್ಷ ಜಿ.ಸುರೇಶ, ಜಿ.ಶಿವಮೂರ್ತಿ, ನಗರಸಭೆ ಎಇಇ ಶಫಿ ಇತರರಿದ್ದರು. ಮೇಘನಾ ಪ್ರಾರ್ಥಿಸಿದರು, ಅಧಿಕಾರಿ ಎಂ.ಎಸ್‌. ಗೋನಾಳ ನಿರೂಪಿಸಿದರು. ಇದಕ್ಕೂ ಮುಂಚೆ ನಗರದ ಮಹಿಳಾ ಸಮಾಜದಿಂದ ಅರಸು ಭಾವಚತ್ರ ಮೆರವಣಿಗೆ ನಡೆಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next