Advertisement

ಜಲಶಕ್ತಿ ಅಭಿಯಾನದಲ್ಲಿ ಹಾಸನ ದೇಶಕ್ಕೆ ಪ್ರಥಮ

03:03 PM Jul 18, 2019 | Naveen |

ಅರಸೀಕೆರೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲಶಕ್ತಿ ಅಭಿಯಾನ ಜನಜಾಗೃತಿ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಹಾಸನ ಜಿಲ್ಲೆಯು ದೇಶದಲ್ಲಿ ಪ್ರಥಮ ಸ್ಥಾನ ಪಡೆಯಲು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳು ನೀಡುತ್ತಿರುವ ಸಹಕಾರ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಸಂತಸ ವ್ಯಕ್ತಪಡಿಸಿದರು.

Advertisement

ಹಾಸನ ಜಿಲ್ಲಾ ಆಡಳಿತ, ಅರಸೀಕೆರೆ ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಬುಧವಾರ ಬೆಳಗ್ಗೆ ಆಯೋಜಿಸಿದ್ದ ಜಲಶಕ್ತಿ ಅಭಿಯಾನ ಜಾಥಾ ಕಾರ್ಯ ಕ್ರಮಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲಶಕ್ತಿ ಅಭಿ ಯಾನ ಯೋಜನೆ ಅನುಷ್ಠಾನಗೊಳಿಸಲು ದೇಶದ 250 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಆದರಲ್ಲಿ ರಾಜ್ಯದ 19 ಜಿಲ್ಲೆಗಳು ಒಳಗೊಂಡಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಜಲ ಶಕ್ತಿ ಅಭಿಯಾನ ಅತ್ಯಂತ ಯಶಸ್ವಿ ಯಾಗಿ ನಡೆಯುತ್ತಿದ್ದು, ದೇಶದಲ್ಲೇ ಹಾಸನ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಇಷ್ಟಕ್ಕೆ ನಾವು ತೃಪ್ತರಾಗದೇ ಜಿಲ್ಲೆಯಲ್ಲಿನ ವಿವಿಧ ಸಂಘ ಸಂಸ್ಥೆಗಳನ್ನು ಜಲಶಕ್ತಿ ಅಭಿಯಾನಕ್ಕೆ ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ವಿವಿಧ ಇಲಾಖೆ ಗಳ ಅಧಿಕಾರಿಗಳು ಹೆಚ್ಚು ಹೆಚ್ಚು ಮಾಡಿದಾಗ ಮಾತ್ರ ಸರ್ಕಾರದ ಆಶಯ ಸಾಕಾರಗೊಳ್ಳುತ್ತದೆ ಎಂದರು.

ಗ್ರಾಮಸಭೆ: ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ ಸಂರಕ್ಷಣೆ ಕುರಿತು ಗ್ರಾಮ ಸಭೆ ಗಳನ್ನು ನಡೆಸಿ ಜಲಸಂರಕ್ಷಣೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ನೀರಿನ ಮಹತ್ವವನ್ನು ಅಧ್ಯಾಪಕರು ಪರಿಚಯಿಸ ಬೇಕಾಗಿದೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ಯಾವ ಯಾವ ಬೆಳೆಗಳನ್ನು ಬೆಳೆಯಲು ಇಂತಿಷ್ಟು ಪ್ರಮಾಣದ ನೀರು ಬಳಕೆ ಮಾಡಬೇಕಾಗುತ್ತದೆ ಎಂಬ ಬಗ್ಗೆ ಅರಿವು ಮೂಡಿಸಲು ಸೂಚನೆ ನೀಡಿದರು.

Advertisement

ಸಭೆಯಲ್ಲಿ ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ, ತೋಟ ಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಂಕರ ಮೂರ್ತಿ, ತಾಪಂ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿದೇರ್ಶಕ ಬೈರಪ್ಪ, ವಲಯ ಅರಣ್ಯ ಅಧಿಕಾರಿ ದಯಾನಂದ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ ಕುಮಾರ್‌ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಾಗೃತಿ ಜಾಥಾ: ಸಭೆಗೂ ಮುನ್ನ ನಗರದ ಸರ್ಕಾರಿ ಹಳೇಯ ಮಾಧ್ಯಮಿಕ ಶಾಲೆ ಆವರಣದಿಂದ ರಾಷ್ಟ್ರೀಯ ಹೆದ್ದಾರಿ ಬಿ.ಎಚ್.ರಸ್ತೆಯ ಮಾರ್ಗವಾಗಿ ತಾಲೂಕು ಕಚೇರಿವರೆಗೂ ಆಯೋಜಿಸಿದ್ದ ಜಲ ಶಕ್ತಿ ಅಭಿಯಾನ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಚಾಲನೆ ನೀಡಿ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಸಾರ್ವಜನಿಕರ ಗಮನವನ್ನು ಸೆಳೆದರು.

ನಗರದ ವಿವಿಧ ಶಾಲೆ ಕಾಲೇಜುಗಳಿಂದ ಮೂರು ಸಾವಿರಕ್ಕು ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಅಂಗನ ವಾಡಿ ಕಾರ್ಯಕರ್ತೆಯರು ಹಾಗೂ ಸ್ವಸಹಾಯ ಸಂಘ ಗಳ ಮಹಿಳೆಯರು ಜಲ ಶಕ್ತಿ ಮಹತ್ವ ಸಾರುವ ಭಿತ್ತಿ ಪತ್ರಗಳನ್ನು ಕೈಯಲ್ಲಿ ಹಿಡಿದು ಜಾಥಾದಲ್ಲಿ ಪಾಲ್ಗೊಂಡು ಜೀವ ಜಲ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next