Advertisement

ಅರಂತೋಡಿನ ಸಂತೆ ಮಾರುಕಟ್ಟೆ ಪ್ರಾಂಗಣ  ಈಗ ವಾಹನ ಶೆಡ್‌

11:55 AM Mar 17, 2018 | Team Udayavani |

ಅರಂತೋಡು: ಅರಂತೋಡು ಸಂತೆ ಮಾರುಕಟ್ಟೆ ಪ್ರಾಂಗಣ ಈಗ ವಾಹನ ಶೆಡ್‌ ಆಗಿ ಪರಿವರ್ತನೆಗೊಂಡಿದೆ. 7 ವರ್ಷಗಳ ಹಿಂದೆ ಸುಳ್ಯ ಎಪಿಎಂಸಿ ವತಿಯಿಂದ ಸಂತೆ ಮಾರುಕಟ್ಟೆ ಪ್ರಾಂಗಣವನ್ನು ಅರಂತೋಡಿನ ಗ್ರಾಮಕರಣಿಕರ ಕಚೇರಿ ಬಳಿ ನಿರ್ಮಿಸಿ ಬಳಿಕ ಅದನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಲಾಗಿತ್ತು. ಅನಂತರದ 2-3 ವರ್ಷಗಳ ಕಾಲ ವಾರದ ಸಂತೆಯು ಇಲ್ಲಿ ಸರಾಗವಾಗಿ ನಡೆಯುತ್ತಿತ್ತು. ಆದರೆ ಇಂದು ಈ ಸಂತೆ ಮಾರುಕಟ್ಟೆಯ ಪ್ರಾಂಗಣ ಸುಸಜ್ಜಿತವಾಗಿದ್ದರೂ ವಾರದ ಸಂತೆ ನಡೆಯುತ್ತಿಲ್ಲ. ಒಂದೆರಡು ತರಕಾರಿ ವ್ಯಾಪರಸ್ಥರು ಅಪರೂಪಕ್ಕೊಮ್ಮೆ ಬಂದು ರಸ್ತೆ ಬದಿಯಲ್ಲೇ ವ್ಯಾಪಾರ ಮಾಡಿ ಹೋಗುತ್ತಾರೆ. ಬರೀ ಇಷ್ಟಕ್ಕೇ ಇದು ಬಳಕೆಯಾಗುತ್ತಿದೆ.

Advertisement

ಸುಸಜ್ಜಿತ ಕಟ್ಟಡ
ಅರಂತೋಡಿನಲ್ಲಿ ಎಪಿಎಂಸಿ ವತಿಯಿಂದ ನಿರ್ಮಾಣವಾದ ಸಂತೆ ಮಾರುಕಟ್ಟೆ ಪ್ರಾಂಗಣ ಸುಸಜ್ಜಿತವಾಗಿದೆ. ಪ್ರತಿವಾರ ಸಂತೆ ವಹಿವಾಟು ನಡೆಯದ ಕಾರಣ ಇತರ ವಾಣಿಜ್ಯ ವ್ಯವಹಾರ ನಡೆಸಲು ಸ್ಥಳೀಯ ಗ್ರಾ. ಪಂ. ಈ ಬಗ್ಗೆ ಕಾರ್ಯ ಪ್ರವೃತ್ತವಾಗಬೇಕು. ಪ್ರತಿವಾರ ಸಂತೆ ಮಾರುಕಟ್ಟೆ ನಡೆಯುವುದರಿಂದ ಸ್ಥಳೀಯ ಗ್ರಾ.ಪಂ.ಗಳಿಗೂ ಆದಾಯ ಬರುತ್ತದೆ. ವಾಣಿಜ್ಯ ವ್ಯವಹಾರ ನಡೆಸುವವರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಇದು ಬಹಳ ಉಪಯುಕ್ತವಾದ ಅವಕಾಶ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮೀಪದಲ್ಲೂ ಸಂತೆ ಇಲ್ಲ
ಸಮೀಪದ ಭಜನ ಮಂದಿರದ ಬಳಿ ಸುಮಾರು 15 ವರ್ಷಗಳ ಹಿಂದೆ ಸ್ಥಳೀಯ ಗ್ರಾ.ಪಂ. ವತಿಯಿಂದ ನಿರ್ಮಾಣವಾದ ಸಂತೆ ಮಾರುಕಟ್ಟೆಯಲ್ಲೂ ಇದೇ ಪರಿಸ್ಥಿತಿ ಇದೆ. ಈ ಸಂತೆ ಮಾರುಕಟ್ಟೆ ಪ್ರಾಂಗಣ ಈಗ ಸಂಪುರ್ಣ ನಾದುರಸ್ತಿಯಲ್ಲಿದ್ದು, ಅಭಿವೃದ್ಧಿಯನ್ನು ಎದುರುನೋಡುತ್ತಿದೆ.

ಬಳಕೆಯಾಗಲಿ
ಸಂತೆ ಮಾರುಕಟ್ಟೆಯ ವಿನ್ಯಾಸ ಹಾಗೂ ಅನುಕೂಲಗಳು ಒಳ್ಳೆಯ ಸ್ಥಿತಿಯಲ್ಲಿವೆ. ಆದರೆ ವ್ಯಾಪಾರಸ್ಥರು ಇದನ್ನು ಸದ್ಭಳಕೆ ಮಾಡುತ್ತಿಲ್ಲ. ಸಂತೆ ಮಾರುಕಟ್ಟೆಯನ್ನು ಗ್ರಾಮ ಪಂಚಾಯತ್‌ ಇತರ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವಂತೆ ಕ್ರಮಕೈಗೊಳ್ಳಲಿ.
– ಹರೀಶ್‌, ಸ್ಥಳೀಯರು

‌ಚರ್ಚಿಸಿ ನಿರ್ಣಯ
ಇದೀಗ ಅನೇಕ ವರ್ಷಗಳಿಂದ ಸಂತೆ ಮಾರುಕಟ್ಟೆ ಪ್ರಾಂಗಣ ಈಗ ವಾಹನ್‌ ಪಾರ್ಕಿಂಗ್‌ ಶೆಡ್ಡ್ ಆಗಿ ಪರಿವರ್ತನೆಗೊಂಡಿದೆ. ಯಾರು ಕೂಡ ಇಲ್ಲಿ ವ್ಯಾಪಾರ ವ್ಯವಹಾರ ನಡೆಸುವುದಿಲ್ಲ. ಜನರಿಂದ ಬೇಡಿಕೆ ಬರುತ್ತಿಲ್ಲ. ವ್ಯಾಪಾರಸ್ಥರು ಇದನ್ನು ಉಪಯೋಗಿಸಿಕೊಳ್ಳಬಹುದು. ಮುಂದಿನ ಗ್ರಾಮ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು.
– ಜಯಪ್ರಕಾಶ್‌ ಪಿ.ಡಿ.ಒ.
ಗ್ರಾಮ ಪಂಚಾಯತ್‌ ಅರಂತೋಡು.

Advertisement

 ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next