ಅರಂತೋಡು: ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಕಾಮಗಾರಿ ಪೂರ್ಣ ಗೊಂಡು ಉದ್ಘಾಟನೆಗೆ ಸಜ್ಜುಗೊಂಡಿದೆ. ಹೊಸ ಕಟ್ಟಡಕ್ಕಾಗಿ ಎರಡೂವರೆ ವರ್ಷ ಗಳಿಂದ ಓದುಗರು ಕಾಯುತ್ತಿದ್ದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನದಲ್ಲಿರುವ ಅರಂತೋಡು ಸಾರ್ವಜನಿಕ ಗ್ರಂಥಾಲಯ ಈಗ ಗ್ರಾ.ಪಂ. ಸಮೀಪದ ಹಳೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸುಮಾರು ಮೂರು ವರ್ಷಗಳ ಹಿಂದೆ ಇಲಾಖೆಯಿಂದ ಮಂಜೂರುಗೊಂಡ 10 ಲಕ್ಷ ರೂ. ಅನುದಾನಕ್ಕೆ ತಕ್ಕಂತೆ ನೀಲ ನಕ್ಷೆ ತಯಾರಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಸಮೀಪ ಇಲಾಖೆಯ ಗ್ರಂಥಾಲಯ ಕಟ್ಟಡ ಕಾಮಗಾರಿಯನ್ನು ಆರಂಭಿಸಲಾಗಿತ್ತು. ನಿರ್ಮಿತಿ ಕೇಂದ್ರದವರು ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿದ್ದರು. ಮಂಜೂರುಗೊಂಡ 10 ಲಕ್ಷ ರೂ. ಅನುದಾನದಲ್ಲಿ ಮೊದಲ ಹಂತದಲ್ಲಿ 5 ಲಕ್ಷ ರೂ. ಮಾತ್ರ ಬಿಡುಗಡೆಗೊಂಡು ಕಾಮಗಾರಿ ನಡೆಸಲಾಯಿತು.
ಬಳಿಕ 5 ಲಕ್ಷ ರೂ. ಅನುದಾನ ಬಿಡುಗಡೆ ಗೊಳ್ಳದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ಜನವರಿ ತಿಂಗಳಿನಲ್ಲಿ ಮತ್ತೆ 5 ಲಕ್ಷ ರೂ. ಅನುದಾನ ಬಿಡುಗಡೆಗೊಂಡು ಕಾಮಗಾರಿಯನ್ನು ಮತ್ತೆ ಆರಂಭಿಸಲಾಯಿತು. ಎರಡನೇ ಹಂತದ ಅನುದಾನ ಬಿಡುಗಡೆಗೆ ವರ್ಷ ಕಳೆದ ಕಾರಣ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗಿತ್ತು.
ಅರಂತೋಡು ಗ್ರಂಥಾಲಯ ಕಟ್ಟಡದ ಕಾಮಗಾರಿ ಆರಂಭಿಸಿ 8 ತಿಂಗಳ ಬಳಿಕ ಕಾಮಗಾರಿ ಪ್ರಾರಂಭಿಸಿದ ದೇವಚಳ್ಳ ಗ್ರಂಥಾಲಯ ಕಾಮಗಾರಿ ಪೂರ್ಣಗೊಂಡು ಕಳೆದೊಂದು ವರ್ಷದಿಂದ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಸುತ್ತಿದೆ. ಆದರೆ 8 ತಿಂಗಳು ಮೊದಲು ಪ್ರಾರಂಭಿಸಿದ್ದ ಅರಂತೋಡು ಗ್ರಂಥಾಲಯ ಕಾಮಗಾರಿ ಪೂರ್ಣಗೊಳ್ಳದಿರುವುದು ವಿಪರ್ಯಾಸ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಲೈಬ್ರೆರಿ ಓದುಗರ ಮೊಗದಲ್ಲಿ ಮಂದ ಹಾಸ ಬೀರಿದೆ.
ಓದುಗರಿಗೆ ಲಭ್ಯ
ಅರಂತೋಡು ಗ್ರಂಥಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಸದ್ಯದಲ್ಲಿಯೇ ಓದುಗರ ಉಪಯೋಗಕ್ಕೆ ಲಭ್ಯವಾಗಲಿದೆ.
ಹರೀಶ್ ಎಂಜಿನಿಯರ್, ನಿರ್ಮಿತಿ ಕೇಂದ್ರ
ತುಂಬಾ ಖುಷಿಯಾಗಿದೆ
ಅರಂತೋಡು ಲೈಬ್ರೆರಿ ಕಟ್ಟಡ ಕಾಮಗಾರಿ ಮುಗಿಯಲು 2 ವರ್ಷ ತಗಲಿದೆ. ಇದೀಗ ಗ್ರಂಥಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಮನಸ್ಸಿಗೆ ತುಂಬಾ ಖುಷಿಯಾಗಿದೆ.
ಅಶ್ರಫ್ ಗುಂಡಿ ಲೈಬ್ರೆರಿ ಒದುಗ
ತೇಜೇಶ್ವರ್ ಕುಂದಲ್ಪಾಡಿ