Advertisement

ಅಪಾಯಕಾರಿ ಸ್ಥಿತಿಯಲ್ಲಿದೆ  ಅರಂತೋಡು ವಿಎ ಕಚೇರಿ

05:18 AM Jan 05, 2019 | |

ಅರಂತೋಡು : ಅರಂತೋಡು ಗ್ರಾಮಕರಣಿಕರ (ವಿ.ಎ.) ಕಚೇರಿ ಶಿಥಿಲ ಗೊಂಡಿದ್ದು, ಅಪಾಯಕಾರಿ ಸ್ಥಿತಿಯನ್ನು ಎದುರಿಸುತ್ತಲಿದೆ. ಈ ಗ್ರಾಮಕರಣಿಕರ ಕಚೇರಿ ಕಟ್ಟಡವು ಅತ್ಯಂತ ಹಳೆಯದಾಗಿದ್ದು, ಇದರ ಮೇಲ್ಛಾವಣಿಯ ಪಕ್ಕಾಸು, ರೀಪು, ಬಾಗಿಲು, ಕಿಟಕಿಗಳಿಗೆ ಗೆದ್ದಲು ಹಿಡಿದಿವೆ. ಇದರಿಂದ ಗ್ರಾಮಕರಣಿಕರ ಕಚೇರಿ ಯಾವಾಗ ಧರಾಶಾಹಿಯಾಗುತ್ತದೋ ಎಂದು ಹೇಳಲಾಗದು. ಇಂದೋ, ನಾಳೆಯೋ ಎನ್ನುವ ಸ್ಥಿತಿಯಲ್ಲಿದೆ ಈ ಕಟ್ಟಡ.

Advertisement

ಎರಡು ಗ್ರಾಮಗಳ ಕಚೇರಿ
ಅರಂತೋಡು ಗ್ರಾಮಕರಣಿಕರ ಕಚೇರಿ ಯಲ್ಲಿ ಅರಂತೋಡು ಮತ್ತು ತೊಡಿಕಾನ ಎರಡು ಗ್ರಾಮಗಳ ಗ್ರಾಮಕರಣಿಕರು ಮತ್ತು ಇಬ್ಬರು ಸಹಾಯಕರು ಹೀಗೆ ಒಟ್ಟು ನಾಲ್ವರು ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ಗ್ರಾಮಗಳಿಗೆ ಸಂಬಂಧಪಟ್ಟ ಕಡತಗಳು ಇಲ್ಲಿವೆ. ಕಚೇರಿ ಶಿಥಿಲಗೊಂಡ ಪರಿಣಾಮ ಕಡತಗಳೂ ನಾಶವಾಗುವ ಭೀತಿ ಎದುರಾಗಿದೆ.

ಬ್ರಿಟೀಷರ ಕಾಲದ ಕಟ್ಟಡ
ಇದು ಬ್ರಿಟೀಷರ ಕಾಲದ ಬಂಗ್ಲೆಯಾಗಿದೆ. ಬ್ರಿಟಿಷರ ಕಾಲದಲ್ಲಿ ಅನೇಕ ಸಾಮಂತ ರಾಜರಿದ್ದು, ಅವರು ಅತ್ತಿತ್ತ ಸಂಚಾರ ನಡೆಸುತ್ತಿದ್ದಾಗ ಕಟ್ಟಡದ ಎದುರು ಕುದರೆಗಳನ್ನು ಕಟ್ಟಿ ಹಾಕಿ ಅಲ್ಲಿ ತಂಗುತ್ತಿದ್ದರೆಂದು ಇತಿಹಾಸಗಳು ಹೇಳುತ್ತವೆ. ಕಟ್ಟಡದ ಎದುರು ಕುದುರೆ ಕಟ್ಟಿ ಹಾಕುವ ಕಂಬಗಳಿದ್ದವು. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಕುದುರೆ ಕಟ್ಟುವ ಕಂಬವನ್ನು ತೆರವುಗೊಳಿಸಲಾಗಿದೆ. ಒಂದು ಶತಮಾನಕ್ಕಿಂತ ಹಳೆಯ ಕಟ್ಟಡವಾ ಇದಾಗಿದೆ ಎಂದು ಹಿರಿಯರು ಹೇಳುತ್ತಾರೆ.

ಗ್ರಾಮಕರಣಿಕರ ಕಟ್ಟಡ ಈ ತನಕ ವಿದ್ಯುತ್‌ ಭಾಗ್ಯ ಕಂಡಿಲ್ಲ. ಸಿಬಂದಿ ಶಿಥಿಲವಾದ ಕಟ್ಟಡದಲ್ಲಿ ಕತ್ತಲೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದಾರೆ. ಬೇಸಗೆ ಕಾಲದಲ್ಲಿ ಬೆವರಿಕೊಂಡೇ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿದೆ. ಸೆಕೆ ತಡೆಯಲಾಗದೆ ಕಚೇರಿ ಸಿಬಂದಿ ಹೊರಗಡೆ ಬಂದು ಆಯಾಸ ನೀಗಿಸಿಕೊಳ್ಳಬೇಕಿದೆ.

ಜಿಲ್ಲಾಧಿಕಾರಿಗಳಿಗೆ ಮನವಿ
ಗ್ರಾಮಕರಣಿಕರ ಕಚೇರಿ ಶಿಥಿಲಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಇಲಾಖೆಯ ಸಿಬಂದಿ ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆತಿಲ್ಲವೆಂದು ತಿಳಿದುಬಂದಿದೆ. ಅರಂತೋಡು ಗ್ರಾಮಕರಣಿಕರ ಕಚೇರಿಯಲ್ಲಿ ಇರಬೇಕಾಗಿದ್ದ ಮುಖ್ಯ ಮೂಲಸೌಕರ್ಯವಾದ ಶೌಚಾಲಯವೇ ಇಲ್ಲಿಲ್ಲ. ನೀರಿನ ವ್ಯವಸ್ಥೆಯೂ ಇಲ್ಲ. ಶೌಚಾಲಯಕ್ಕೆ ತೆರಳಬೇಕೆಂದರೆ ದೂರದ ಸಾರ್ವಜನಿಕ ಬಸ್ಸು ನಿಲ್ದಾಣದ ಶೌಚಾಲಯವೇ ಗತಿ. ಒಟ್ಟಾರೆ ಮೂಲಸೌಕರ್ಯಗಳಿಲ್ಲದಿರುವ ಅರಂತೋಡು ಗ್ರಾಮಕರಣಿಕರ ಕಚೇರಿಗೆ ಕಾಯಕಲ್ಪ ನೀಡುವ ಕೆಲಸ ಕಂದಾಯ ಇಲಾಖೆಯಿಂದ ಆಗಬೇಕಾಗಿದೆ.

Advertisement

ತಹಶೀಲ್ದಾರರಿಂದ ಪರಿಶೀಲನೆ
ನಮ್ಮ ಕಚೇರಿ ತುಂಬಾ ಹಳೆಯದಾ ಗಿದ್ದು, ಇಲ್ಲಿರುವ ಸಮಸ್ಯೆಗೆ ಬದಲಿ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಇತ್ತೀಚೆಗೆ ತಹಶೀಲ್ದಾರರು ಬಂದು ಪರಿಶೀಲನೆ ನಡೆಸಿ ತೆರಳಿದ್ದಾರೆ. ಯಾವಾಗ ಹೊಸ ಕಟ್ಟಡ ನಿರ್ಮಾಣವಾಗುತ್ತದೆ ಎನ್ನುವುದು. ತಿಳಿದುಬಂದಿಲ್ಲ.
 – ವಾರಿಜಾಕ್ಷಿ
  ಗ್ರಾಮಕರಣಿಕರು

ನೂತನ ಕಟ್ಟಡವಾಗಲಿ
ಅರಂತೋಡು ವಿ.ಎ. ಕಚೇರಿ ನಾದುರಸ್ತಿಯಲ್ಲಿದೆ. ನೂತನ ಕಟ್ಟಡ ನಿರ್ಮಾಣ ಆಗಬೇಕು. ಈಗಿನ ಕಟ್ಟಡ ಬಹಳ ಅಪಾಯಕಾರಿ ಸ್ಥಿತಿಯಲ್ಲಿದೆ. ಇಲ್ಲಿ ಅರಂತೋಡು ಮತ್ತು ತೊಡಿಕಾನ ಗ್ರಾಮದ ಎರಡು ಗ್ರಾಮಕರಣಿಕರಿದ್ದಾರೆ. ಜತೆಗೆ ಸಹಾಯಕರಿದ್ದಾರೆ. ತೊಡಿಕಾನದ ವಿ.ಎ. ತೊಡಿಕಾನಕ್ಕೆ ಬಂದರೆ ಗ್ರಾಮಸ್ಥರಿಗೆ ತುಂಬಾ ಸಹಕಾರಿಯಾಗುತ್ತದೆ. 
– ಸಂತೋಷ್‌ ಕುತ್ತಮೊಟ್ಟೆ 
ಅಧ್ಯಕ್ಷರು, ವ್ಯವಸಾಯ ಸೇ. ಸ. ಬ್ಯಾಂಕ್‌ 

Advertisement

Udayavani is now on Telegram. Click here to join our channel and stay updated with the latest news.

Next