ದೇವನಹಳ್ಳಿ: ಹಿಂದೂ ಸಂಪ್ರದಾಯದಲ್ಲಿ ಅಶ್ವತ್‌ಕಟ್ಟೆಯಲ್ಲಿ ಅರಳೀಮರ ಹಾಗೂ ಬೇವಿನಮರ ನಾಗದೇವತೆಗಳ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ತಿಳಿಸಿದರು.
ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಅರಿಶಿನಕುಂಟೆ ಗ್ರಾಮದಲ್ಲಿ ನಾಗದೇವತೆಯ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ಅರಳೀಕಟ್ಟೆ ನ್ಯಾಯ ಸ್ಥಾನವಾಗಿದ್ದು, ಇದಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಿದ್ದರು.
ನ್ಯಾಯಾಲಯ, ಪೊಲೀಸ್ ಠಾಣೆ ಯಾವುದಕ್ಕೂ ಮೊರೆ ಹೋಗುತ್ತಿರಲಿಲ್ಲ. ಅರಳೀಕಟ್ಟೆಯಲ್ಲಿ ಗ್ರಾಮದ ಮುಖಂಡರ ತೀರ್ಮಾನವೇ ಅಂತಿಮವಾಗಿತ್ತು ಎಂದರು. ಜಿಪಂ ಸದಸ್ಯ ಲಕ್ಷ್ಮೀನಾರಾಯಣ್ ಮಾತನಾಡಿ, ಚನ್ನರಾಯಪಟ್ಟಣ ಜಿಪಂ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ.
ಅರಳೀಕಟ್ಟೆ ನಿರ್ಮಾಣಕ್ಕೆ ಗ್ರಾಪಂ ವತಿಯಿಂದ ಉದ್ಯೋಗ ಖಾತರಿ ಯೋಜನೆ ಮುಖಾಂತರ ಅನುದಾನ ಸಿಗುತ್ತದೆ. ಇದಕ್ಕೆ ಗ್ರಾಮಸ್ಥರ ಒಗ್ಗಟ್ಟಿನಿಂದ ಇಂಥ ದೇವಾಲಯಗಳನ್ನು ಅಭಿವೃದ್ಧಿ ಪಡಿಸಬಹುದು ಎಂದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಕೆಂಪೇಗೌಡ, ಉಪಾಧ್ಯಕ್ಷ ನವೀನ್,
ಸದಸ್ಯರಾದ ಆಂಜಿನಪ್ಪ, ಮಹಾದೇವಿ ವೀರಭದ್ರಪ್ಪ, ಮಮತಾ ಕೃಷ್ಣ, ಮಹಾಲಕ್ಷ್ಮೀ, ಸೋಮಶೇಖರ್, ಗಂಗರೆಡ್ಡಿ, ಎಸ್‌ಸಿಎಫ್ಸಿ ಬ್ಯಾಂಕ್ ಅಧ್ಯಕ್ಷ ಲಲಿತೇಶ್, ಎಂಪಿಸಿಎಸ್ ಅಧ್ಯಕ್ಷ ನಾರಾಯಣಪ್ಪ, ಮಾಜಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ವೀರಭದ್ರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟರಾಮಯ್ಯ ಮತ್ತಿತರರಿದ್ದರು.