ರಾಯಚೂರು: ಅರ್ಹತೆ ಇಲ್ಲದಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದು ಅರಕೇರಾವನ್ನು ತಾಲೂಕು ಕೇಂದ್ರ ಮಾಡಲು ಹೊರಟಿರುವುದು ಅವೈಜ್ಞಾನಿಕವಾಗಿದ್ದು, ಈ ಕುರಿತು ಜಿಲ್ಲಾಡಳಿತ ಕೂಡ ತಪ್ಪು ಮಾಹಿತಿ ನೀಡಿದೆ ಎಂದು ಅಖಂಡ ದೇವದುರ್ಗ ಹೋರಾಟ ಸಮಿತಿ ಸಂಚಾಲಕ ಹನುಮಂತಪ್ಪ ಕಾಕರಗಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ದೇವದುರ್ಗ ತಾಲೂಕನ್ನು ಅಭಿವೃದ್ಧಿಗೊಳಿಸದೇ ಅರಕೇರಾ ತಾಲೂಕು ಮಾಡಲು ಮುಂದಾಗಿರುವುದೇ ಅವೈಜ್ಞಾನಿಕ ನಿರ್ಧಾರ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ಶಾಸಕ ಶಿವನಗೌಡ ನಾಯಕರ ರಾಜಕೀಯ ಒತ್ತಡಕ್ಕೆ ಮಣಿದು ಒಂದು ಗ್ರಾಪಂ ಕೇಂದ್ರವನ್ನು ತಾಲೂಕನ್ನಾಗಿ ಮಾಡಲಾಗಿದೆ.
ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಮರುಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಆಕ್ಷೇಪಣೆಗೆ ಅರ್ಜಿ ಕರೆದಾಗ ಸುಮಾರು 4 ಸಾವಿರಕ್ಕೂ ಅ ಧಿಕ ಅರ್ಜಿ ಸಲ್ಲಿಕೆಯಾಗಿವೆ. ಇಷ್ಟಾದರೂ ಜಿಲ್ಲಾಡಳಿತ ಒತ್ತಡಕ್ಕೆ ಮಣಿದು ತಾಲೂಕು ಕೇಂದ್ರ ಮಾಡಬಹುದು ಎಂದು ವರದಿ ನೀಡಿದೆ ಎಂದು ದೂರಿದರು.
ದೇವದುರ್ಗ ತಾಲೂಕು ಅತೀ ಹಿಂದುಳಿದ ತಾಲೂಕಾಗಿದೆ. ಅದನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕಿದೆ. ಆದರೆ, ಶಾಸಕ ಶಿವನಗೌಡ ನಾಯಕ ಅವರು ರಾಜಕೀಯ ದುರುದ್ದೇಶದಿಂದ ತಮ್ಮ ಗ್ರಾಮ ಅರಕೇರಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ.
ಅರಕೇರಾದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ, ಈ ಹಿಂದೆ ಸಿರವಾರ ಹಾಗೂ ಮಸ್ಕಿ ತಾಲೂಕು ಕೇಂದ್ರ ಮಾಡಿದ್ದು, ಇವುಗಳಿಗೆ ಈವರೆಗೆ ಮೂಲ ಸೌಲಭ್ಯ ಕಲ್ಪಿಸಲಿಲ್ಲ. ಈಗ ಮತ್ತೊಂದು ಹೊಸ ಅರಕೇರಾ ತಾಲೂಕು ಘೋಷಣೆ ಮಾಡಿದ್ದಾರೆ. ಇದೇ ತಾಲೂಕಿನ ಗಬ್ಬೂರು ಹೋಬಳಿ ತಾಲೂಕು ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಅರ್ಹತೆ ಇದ್ದರೂ ಮಾಡದೆ ಕನಿಷ್ಠ ಸೌಲಭ್ಯವಿಲ್ಲದ ಅರಕೇರಾವನ್ನು ತಾಲೂಕು ಮಾಡಿರುವುದು ಸರಿಯಲ್ಲ. ಸರ್ಕಾರ ಈ ಕೂಡಲೇ ಜನರ ಅಭಿಪ್ರಾಯ ಸಂಗ್ರಹಿಸಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಹೈ ಕೋರ್ಟ್ ಮೊರೆ ಹೋಗಲಾಗುವುದು ಎಂದರು. ಈ ಸಂದರ್ಭದಲ್ಲಿ ಶಿವರಾಜ ನಾಯಕ, ಮಲ್ಲಯ್ಯ, ಧರ್ಮರಾಜ, ಶಿವಪ್ಪ ಸೇರಿದಂತೆ ಅನೇಕರು ಇದ್ದರು.