Advertisement

ಅರಕೇರಾ ಬಸ್‌ ನಿಲ್ದಾಣ ಅವ್ಯವಸ್ಥೆ ತಾಣ

03:34 PM Sep 17, 2019 | Suhan S |

ದೇವದುರ್ಗ: ಶಾಸಕ ಕೆ.ಶಿವನಗೌಡ ನಾಯಕ ಅವರ ಸ್ವಗ್ರಾಮ ಅರಕೇರಾದ ಬಸ್‌ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಪ್ರಯಾಣಿಕರಿಗೆ ಕುಡಿಯುವ ನೀರು, ಶೌಚಾಲಯದಂತಹ ಸೌಲಭ್ಯಗಳು ಮರೀಚಿಕೆಯಾಗಿವೆ. ಸ್ವಚ್ಛತೆ ಮಾಯವಾಗಿದೆ.

Advertisement

ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಗುಟ್ಕಾ ತಿಂದು ಉಗಿಯಲಾಗಿದೆ. ಕುಡಿಯುವ ನೀರು, ಆಸನ ವ್ಯವಸ್ಥೆ ಇಲ್ಲದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಪ್ರಯಾಣಿಕರು ಕುಡಿಯುವ ನೀರಿಗಾಗಿ ಪಕ್ಕದ ಹೋಟೆಲ್ಗಳ ಮೊರೆ ಇಲ್ಲವೇ ನೀರಿನ ಬಾಟಲಿ ಖರೀದಿಸುವುದು ಅನಿವಾರ್ಯವಾಗಿದೆ.

ಬಸ್‌ ನಿಲ್ದಾಣದಲ್ಲಿ ಶೌಚಾಲಯ ಇದ್ದರೂ ಇಲ್ಲದಂತಾಗಿದೆ. ನಿರ್ವಹಣೆ ಮತ್ತು ನೀರಿನ ಕೊರತೆಯಿಂದಾಗಿ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಪ್ರಯಾಣಿಕರು ಮಲ, ಮೂತ್ರ ವಿಸರ್ಜನೆಗೆ ಜಾಗೆ ಹುಡುಕಿಕೊಂಡು ಹೋಗುವಂತಾಗಿದೆ.

ಕುಡುಕರ ತಾಣ: ಅರಕೇರಾ ಬಸ್‌ ನಿಲ್ದಾಣದಲ್ಲಿ ರಾತ್ರಿಯಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳ ಕಾಟ ಹೆಚ್ಚುತ್ತದೆ. ಕೆಲವರು ಬಸ್‌ ನಿಲ್ದಾಣದ ಆವರಣದಲ್ಲೇ ಮದ್ಯ ಸೇವಿಸುತ್ತಿದ್ದಾರೆ. ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಪೌಚ್‌ಗಳು ಬಿದ್ದಿರುತ್ತವೆ. ಇದರಿಂದ ರಾತ್ರಿ ಬಸ್‌ ನಿಲ್ದಾಣಕ್ಕೆ ಆಗಮಿಸುವ ಮಹಿಳೆಯರು, ಪ್ರಯಾಣಿಕರು ಮುಜುಗರ ಪಡುವಂತಾಗಿದೆ. ಬಸ್‌ ನಿಲ್ದಾಣದಲ್ಲೇ ಇಂತಹ ಚಟುವಟಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದು ಅನುಮಾನಕ್ಕೆಡೆ ಮಾಡಿದೆ.

ಖಾಸಗಿ ವಾಹನಗಳ ಕಾಟ: ಅರಕೇರಾ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಅಬ್ಬರ ಹೆಚ್ಚಾಗಿದೆ. ಸರಕಾರಿ ಬಸ್‌ ನಿಲ್ದಾಣಕ್ಕಿಂತ ಖಾಸಗಿ ವಾಹನಗಳ ನಿಲ್ದಾಣ ಎಂಬಂತಾಗಿದೆ. ಕಡಿವಾಣ ಹಾಕಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರಿಂದ ನಿಲ್ದಾಣದ ಒಳಗಡೆಯೇ ಖಾಸಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

Advertisement

ಅಸ್ವಚ್ಛತೆ: ಅರಕೇರಾ ಬಸ್‌ ನಿಲ್ದಾಣದಲ್ಲಿ ಸ್ವಚ್ಛತಾ ಸಿಬ್ಬಂದಿ ಇಲ್ಲದ್ದರಿಂದ ಅಸ್ವಚ್ಛತೆ ವಾತಾವರಣವಿದೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಗುಟ್ಕಾ ತಿಂದು ಉಗಿಯಲಾಗಿದೆ.

ರಾಜಕೀಯ ಶಕ್ತಿ ಕೇಂದ್ರ: ಅರಕೇರಾ ಗ್ರಾಮ ರಾಯಚೂರು ಜಿಲ್ಲೆಯ ರಾಜಕೀಯ ಶಕ್ತಿ ಕೇಂದ್ರವಾಗಿದೆ. ಮಾಜಿ ಸಂಸದ ಬಿ.ವಿ. ನಾಯಕ, ದಿ| ಶಾಸಕ ಎ. ವೆಂಕಟೇಶ ನಾಯಕ, ಹಾಲಿ ಶಾಸಕ ಕೆ. ಶಿವನಗೌಡ ಅವರ ಸ್ವಗ್ರಾಮವಾಗಿದೆ. ಇಂತಹ ಘಟಾನುಘಟಿ ನಾಯಕರ ತವರಿನ ಬಸ್‌ ನಿಲ್ದಾಣದ ಅಭಿವೃದ್ಧಿಗೆ ನಾಯಕರು ಒತ್ತು ನೀಡದಿರುವುದು ವಿಪರ್ಯಾಸವಾಗಿದೆ. ಮಾದರಿ ತಾಲೂಕು ಮಾಡುವ ಕನಸು ಹೊಂದಿರುವ, ಕಾರ್ಯಕ್ರಮದ ವೇದಿಕೆಗಳಲ್ಲಿ ಕೋಟಿ-ಕೋಟಿ ಅನುದಾನ ತರುವುದಾಗಿ ಹೇಳುವ ಅವರ ಊರಿನ ಬಸ್‌ ನಿಲ್ದಾಣ ಸುಧಾರಣೆಗೆ ಏಕೆ ಮುಂದಾಗಿಲ್ಲ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಇನ್ನಾದರೂ ಬಸ್‌ ನಿಲ್ದಾಣ ಸುಧಾರಣೆಗೆ ಶಾಸಕರು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

•ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next