ಹಾಸನ: ಅರಕಲಗೂಡು ಮತ್ತು ಆಲೂರು ಪಟ್ಟಣ ಪಂಚಾಯ್ತಿಗಳಿಗೆ ಬುಧವಾರ ನಡೆದಿದ್ದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಎರಡೂ ಪಪಂಗಳಿಗೆ ಮತದಾರರು ಅತಂತ್ರ ತೀರ್ಪು ನೀಡಿದ್ದಾರೆ.
ಅರಕಲಗೂಡು ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಿ 9.30ರ ವೇಳೆಗೆ ಪೂರ್ಣ ಫಲಿತಾಂಶ ಹೊರಬಿತ್ತು. 1ರಿಂದ 9ನೇ ವಾರ್ಡ್‌ಗಳ ಮತ ಎಣಿಕೆ ಕಾರ್ಯ ಒಂದು ಟೇಬಲ್ ಮತ್ತು 10 ರಿಂದ 17ನೇ ವಾರ್ಡ್‌ಗಳ ಮತ ಎಣಿಕೆ ಕಾರ್ಯ ಮತ್ತೂಂದು ಟೇಬಲ್ನಲ್ಲಿ ಏಕ ಕಾಲದಲ್ಲಿ ನಡೆಯಿತು.
ಫಲಿತಾಂಶ ಹೊರ ಬೀಳುತ್ತಿದ್ದಂತೆ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ವಿಜ ಯೋತ್ಸವ ಆಚರಿಸಿ ಸಂಭ್ರಮಿಸಿದರು. ಮಧ್ಯಾಹ್ನ ತಾ| ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳಾದ ಶಿವರಾಜ್ ಹಾಗೂ ಶಿವನಂಜೇಗೌಡ ಪ್ರಮಾಣ ಪತ್ರ ವಿತರಿಸಿದರು.
ಅರಕಲಗೂಡು ಪಪಂನಲ್ಲಿ ಜೆಡಿಎಸ್ ಮತ್ತು ಬಿಜೆಪಿ ತಲಾ 6 ವಾರ್ಡುಗಳಲ್ಲಿ ಗೆದ್ದು ಸಮಬಲ ಸಾಧಿ ಸಿದ್ದರೆ, 11 ಸದಸ್ಯ ಬಲದ ಅಲೂರು ಪಪಂನಲ್ಲಿ ಜೆಡಿಎಸ್ 5 ಸ್ಥಾನ ಗೆದ್ದು, ಬಹುಮತಕ್ಕೆ ಒಂದು ಸ್ಥಾನದ ಕೊರತೆ ಎದುರಿಸುತ್ತಿದೆ. ಅಧಿಕಾರ ಹಿಡಿಯಲು ಪಕ್ಷೇತ ರರು ಅಥವಾ ಕಾಂಗ್ರೆಸ್ ಬೆಂಬಲ ಅಗತ್ಯವಿದೆ. 17 ವಾರ್ಡುಗಳಿರುವ ಅರಕಲಗೂಡು ಪಪಂನಲ್ಲಿ ಜೆಡಿಎಸ್ – 6, ಬಿಜೆಪಿ – 6, ಕಾಂಗ್ರೆಸ್ 5 ಸ್ಥಾನ ಪಡೆದುಕೊಂಡಿದ್ದರೆ, 11 ವಾರ್ಡುಗಳಿರುವ ಆಲೂರು ಪಪಂನಲ್ಲಿ ಜೆಡಿಎಸ್ – 5, ಪಕ್ಷೇತರರು – 3, ಕಾಂಗ್ರೆಸ್ -2 ಹಾಗೂ ಬಿಜೆಪಿ 1 ಸ್ಥಾನ ಪಡೆದಿದೆ.