ಮೈಸೂರು: ರಾಜ್ಯದ ಜನತೆಗೆ ಒಳ್ಳೆಯದು ಮಾಡಲಿ, ಒಳ್ಳೆಯ ಮನಸ್ಸು ಕೊಡಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಕಾನೂನು ಸುವ್ಯವಸ್ಥೆ ಹತೋಟಿಗೆ ಬರುವಂತೆ ಪ್ರಾರ್ಥಿಸಿದ್ದೀನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗೃಹ ಸಚಿವನಾದ ಬಳಿಕ ಇದೇ ಮೊದಲ ಬಾರಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದಿದ್ದೇನೆ. ದರ್ಶನ ಮಾಡಿ ನನಗೆ ತುಂಬಾ ಸಂತೋಷವಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನನಗೆ, ನಮ್ಮ ಪೊಲೀಸ್ ಇಲಾಖೆಗೆ ಶಕ್ತಿಕೊಡುವಂತೆ ಕೇಳಿಕೊಂಡಿದ್ದೇನೆ ಎಂದರು.
ರಾಜ್ಯದ ಜನತೆಗೆ ಒಳ್ಳೆಯದು ಮಾಡಲಿ, ಒಳ್ಳೆ ಮನಸ್ಸು ಕೊಡಲಿ ಎಂದು ಪ್ರಾರ್ಥಿಸಿದ್ದೇನೆ. ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆ ಆಗುವುದಲ್ಲ, ಕ್ರೈಂ ಆಗದಂತೆ ಚಾಮುಂಡೇಶ್ವರಿಯಲ್ಲಿ ಕೇಳಿಕೊಂಡಿದ್ದೇನೆ ಎಂದರು.
ಇದನ್ನೂ ಓದಿ:ಮೈಸೂರು ದರೋಡೆ ಶೂಟೌಟ್ ಪ್ರಕರಣ ಭೇದಿಸಿದ ಪೊಲೀಸರು: ಪುಣೆಯಲ್ಲಿ ಇಬ್ಬರು ಆರೋಪಿಗಳ ಬಂಧನ
ಮೈಸೂರು ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂತ್ರಸ್ಥ ಯುವತಿ ಇನ್ನೂ ಹೇಳಿಕೆ ನೀಡಿಲ್ಲ. ಆರೋಪಿಗಳ ಪತ್ತೆಗಾಗಿ ತಂಡಗಳನ್ನ ರಚಿಸಲಾಗಿದೆ. ಪ್ರಾಮಾಣಿಕವಾಗಿ ತನಿಖೆ ನಡೆಯುತ್ತಿದೆ. ಖಂಡಿತವಾಗಿ ಆರೋಪಿಗಳನ್ನ ಬಂಧಿಸುವ ವಿಶ್ವಾಸವಿದೆ ಎಂದರು.
ಈಗ ನಾನೇನು ಹೇಳಲಾರೆ, ತನಿಖೆಗೆ ಅಡಚಣೆಯಾಗುತ್ತದೆ. ಮೈಸೂರು ಕಾನೂನು ಸುವ್ಯವಸ್ಥೆ ಬಗ್ಗೆ ಇವತ್ತು ಸಭೆ ನಡೆಸುತ್ತೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.