ಚಿಕ್ಕಮಗಳೂರು: ನನ್ನ ಮೇಲೆ ಬಹಳ ದೊಡ್ಡ ಹೊಣೆಗಾರಿಕೆ ಹೊರಿಸಿದ್ದಾರೆ. ಗೃಹ ಖಾತೆ ಸಿಕ್ಕಿರುವುದು ನನಗೂ ಖುಷಿಯಾಗಿದೆ. ಬಹಳ ದೊಡ್ಡ ಖಾತೆ ಕೊಟ್ಟಿದ್ದಾರೆ, ಬಹಳ ಸಂತೋಷವಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ಹೇಳಿದರು.
ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ಬಹಳ ಸೂಕ್ಷ್ಮ ಇಲಾಖೆ. ಅದನ್ನು ನಾನು ನಿರ್ವಹಿಸಬಹುದೆಂದು ನನ್ನನ್ನು ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿಗೆ ಧನ್ಯವಾದಗಳು ಹೇಳುತ್ತೇನೆ ಎಂದರು.
ಯಾವ ಖಾತೆಯೂ ದೊಡ್ಡದಲ್ಲ, ಯವ ಖಾತೆಯೂ ಸಣ್ಣದಲ್ಲ. ನಿಭಾಯಿಸುವ ವ್ಯಕ್ತಿಯ ಮೇಲೆ ನಿರ್ಧಾರವಾಗುತ್ತದೆ. ನನಗೆ ಯಾವ ನಿರೀಕ್ಷೆಯೂ ಇರಲಿಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದಿದ್ದೆ ಎಂದರು.
ಇದನ್ನೂ ಓದಿ:‘ಜನತಾ ಪರಿವಾರ ಸರ್ಕಾರ’ದ ಛಾಯೆ ಕಳೆಯಲು ಸಂಘ ಹಿನ್ನೆಲೆಯವರಿಗೆ ಬಂಪರ್: ಏನಿದು ಲೆಕ್ಕಾಚಾರ?
ರಾಜ್ಯದ ಜನರ ರಕ್ಷಣೆ, ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಹಕಾರದಿಂದ ಖಾತೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಈ ರಾಜ್ಯ ಶಾಂತಿ ಸುವ್ಯವಸ್ಥೆಯಿಂದ ಇರುವ ಹಾಗೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಸಂಘ ಕೊಟ್ಟ ಶಿಸ್ತು, ಸಂಯಮ ಖಾತೆ ನಿಭಾಯಿಸಲು ಸಹಕಾರಿಯಾಗುತ್ತದೆ. ಗೃಹ ಖಾತೆಯನ್ನು ರಾಜ್ಯದ ಜನರ ಪರವಾಗಿ ಇರುವಂತೆ ಮಾಡುತ್ತೇನೆ ಎಂದು ಎನ್.ಆರ್.ಪುರದಲ್ಲಿಅರಗ ಜ್ಞಾನೆಂದ್ರ ಹೇಳಿದರು.