Advertisement
ಮಂಗಳವಾರ ಪಟ್ಟಣದ ಬಂಟರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾವು ಗೆದ್ದರೆ ಮಹಿಳೆಯರಿಗೆ 2000 ರೂ.ಗಳು ಪದವೀಧರರಿಗೆ 3000 ಡಿಪ್ಲೋಮಾ ಪದವೀಧರರಿಗೆ 1,500, ಪ್ರತಿ ಮನೆಗೂ 200 ಯೂನಿಟ್ ಹಾಗೂ ಪ್ರತಿ ಮನೆಗೂ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಗ್ಯಾರಂಟಿ ಕಾರ್ಡ್ ನಲ್ಲಿ ಮುದ್ರಣ ಮಾಡಿದ್ದಾರೆ. ಗ್ಯಾರೆಂಟಿ ಕಾರ್ಡ್ ನ ಮುದ್ರಣ ಮಾಡಿರುವಂತಹ ಪ್ರೆಸ್ ಹೆಸರು ಎಲ್ಲೂ ಹಾಕಿಲ್ಲ. ಚುನಾವಣಾ ನೀತಿ ಸಂಹಿತೆ ಅನುಸಾರವಾಗಿ ಪ್ರಿಂಟ್ ಮಾಡಿದವರ ಹೆಸರು ಅಲ್ಲಿ ಇರಬೇಕು. ಎಷ್ಟು ಗ್ಯಾರೆಂಟಿ ಕಾರ್ಡ್ ಪ್ರಿಂಟ್ ಆಗಿದೆ ಎಂದು ತೋರಿಸಬೇಕು ಎಂದರು.
Related Articles
Advertisement
ಗೃಹಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ ಎಂದು ಹೇಳುತ್ತಾರೆ. ಯಾವ ಮನೆಗೂ 200 ಯೂನಿಟ್ ಅವಶ್ಯಕತೆಯೇ ಇಲ್ಲ. ಎಲ್ಲೂ ಕೂಡ ವಿದ್ಯುತ್ ಅಷ್ಟೊಂದು ಬಳಕೆ ಮಾಡುವುದಿಲ್ಲ. ದೆಹಲಿಯಲ್ಲಿ ಕೂಡ ವಿದ್ಯುತ್ ಉಚಿತವಾಗಿ ಕೊಡುತ್ತವೆ ಎಂದು ಆಪ್ ಸರ್ಕಾರ ಹೇಳಿದ್ದರು. ಈಗ ಅದನ್ನು ವಾಪಸ್ ತೆಗೆದುಕೊಂಡಿದ್ದಾರೆ. ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದೆ ಎಂದು ದೆಹಲಿಯ ಆಪ್ ಸರ್ಕಾರ ತನ್ನ ಯೋಜನೆಗಳನ್ನು ವಾಪಸ್ ತೆಗೆದುಕೊಂಡಿದೆ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಮತ್ತು ನಿರುದ್ಯೋಗಿ ಪದವೀಧರರಿಗೆ ಕೊಡುವಂತಹ ಹಣ ಎರಡು ಲಕ್ಷ ಕೋಟಿಗೂ ಅಧಿಕ ಹಣ ಬೇಕು. ಒಟ್ಟು ಈ ವರ್ಷದ ಬಜೆಟ್ ಮೂರು ಲಕ್ಷದ ಒಂಬತ್ತು ಸಾವಿರ ಕೋಟಿ. ಕಾಂಗ್ರೆಸ್ ನವರು ಗ್ಯಾರೆಂಟಿ ಕಾರ್ಡ್ ನಲ್ಲಿ ಅಷ್ಟೊಂದು ಹಣಕ್ಕೆ ಆದಾಯವನ್ನು ಎಲ್ಲಿಂದ ತರುತ್ತೇವೆ ಎಂದು ಜನರಿಗೆ ತಿಳಿಸಲಿಲ್ಲ. ಮೇಲಿನಿಂದ ಕುಬೇರ ಏನಾದರೂ ಸುರಿಸುತ್ತಾನ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದವರ ಸಾಧನೆ ಶೂನ್ಯ. ಹೇಳಿಕೊಳ್ಳುವಂತಹ ಯಾವ ಸಾಧನೆ ಅವರು ಮಾಡಿಲ್ಲ. ಟಿಪ್ಪು ಜಯಂತಿ, ಶಾದಿಭಾಗ್ಯ ಜಾತಿ ಆಧಾರದ ಮೇಲೆ ಮಕ್ಕಳನ್ನು ಟೂರ್ ಕಳಿಸುವಂತಹದ್ದು, ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿದ್ದು, ಇಂತಹ ಸಾಧನೆಗಳೇ ಆ ಪಕ್ಷಕ್ಕೆ ಹಿಂದಿನ ಚುನಾವಣೆಯಲ್ಲಿ ಮುಳ್ಳಾಗಿತ್ತು ಈಗ ಹೊಸ ಗಿಮಿಕ್ ಅನ್ನ ಶುರು ಮಾಡಿದ್ದಾರೆ ಎಂದರು.
ಈಗಾಗಲೇ ಗ್ಯಾರೆಂಟಿ ಕಾರ್ಡ್ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ನಾವು ದೂರನ್ನು ನೀಡಿದ್ದೇವೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ. ಇನ್ನು ಗ್ಯಾರೆಂಟಿ ಕಾರ್ಡ್ ಹಂಚುವಾಗ ಪ್ರತಿ ಮನೆಯಲ್ಲಿ ಆಧಾರ್ ಕಾರ್ಡ್ ನಂಬರ್ ಮತ್ತು ಪಾನ್ ಕಾರ್ಡ್ ನಂಬರ್ ತೆಗೆದುಕೊಳ್ಳುತ್ತಿದ್ದಾರೆ. ಜನರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಚುನಾವಣಾ ಆಯೋಗದವರು ಬಂದರೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಟ್ಟು ಓಡಿ ಹೋಗುತ್ತಾರೆ ಎಂದು ಹೇಳಿದರು.
ಈ ರೀತಿ ಅನೈತಿಕ ಮಾರ್ಗ ಹಿಡಿದಿರುವ ಕಾಂಗ್ರೆಸ್ ಗೆ ಸೋಲಿನ ಭೀತಿ ಕಾಡುತ್ತಿದೆ. ಇಡೀ ದೇಶದ ಜನರು ಕಾಂಗ್ರೆಸ್ ಅನ್ನು ಸೋಲಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಾದರೂ ಇತ್ತು. ಈಗ ಅದನ್ನು ಕೂಡ ಕಳೆದುಕೊಳ್ಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಎಂ.ಎಲ್.ಸಿ., ಡಿ.ಎಸ್ ಅರುಣ್, ಬಾಳೆಬೈಲು ರಾಘವೇಂದ್ರ, ನಾಗರಾಜ್ ಶೆಟ್ಟಿ, ಸಂದೇಶ್ ಜವಳಿ, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ರಕ್ಷಿತ್ ಮೇಗರವಳ್ಳಿ, ಸೇರಿ ಹಲವರು ಉಪಸ್ಥಿತರಿದ್ದರು.